ತನ್ನ ಮೊಬೈಲ್ ಫೋನ್‌ನಲ್ಲಿ ನ್ಯಾಯಾಲಯದ ಕಲಾಪಗಳ ‘ಆಡಿಯೋ ರೆಕಾರ್ಡಿಂಗ್’ ಮಾಡುತ್ತಿರುವುದು ಕಂಡುಬಂದ ನಂತರ ಬಾಂಬೆ ಹೈಕೋರ್ಟ್ ವ್ಯಕ್ತಿಯೊಬ್ಬರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ನ್ಯಾಯಮೂರ್ತಿಗಳಾದ ಅಜಯ್ ಗಡ್ಕರಿ ಮತ್ತು ಕಮಲ್ ಖಾಟಾ ಅವರ ಪೀಠವು ಫೆಬ್ರವರಿ 27 ರಂದು ಈ ಆದೇಶವನ್ನು ನೀಡಿದೆ. ಪ್ರಕರಣದಲ್ಲಿ ಪ್ರತಿವಾದಿಗಳಲ್ಲಿ ಒಬ್ಬರ ಸಂಬಂಧಿಯಾಗಿದ್ದ ಸಜೀದ್ ಅಬ್ದುಲ್ ಜಬ್ಬಾರ್ ಪಟೇಲ್ ತನ್ನ ‘ದುರ್ವರ್ತನೆ’ಗಾಗಿ 1 ಲಕ್ಷ ರೂಪಾಯಿ ದಂಡ ಪಾವತಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ಇಬ್ಬರು ಸಹೋದರರ ನಡುವಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸುತ್ತಿದ್ದಾಗ, ಖಾಸಗಿ ಪ್ರತಿವಾದಿಗಳ ಸಂಬಂಧಿಗಳಲ್ಲಿ ಒಬ್ಬರಾದ ಪಟೇಲ್ ನ್ಯಾಯಾಲಯದ ಕೊಠಡಿಯಲ್ಲಿ ತಮ್ಮ ಮೊಬೈಲ್ ಫೋನ್ ಅನ್ನು ಬಳಸುತ್ತಿರುವುದು ಕಂಡುಬಂದಿತ್ತು. ಪಟೇಲ್ ಕಲಾಪಗಳ ಆಡಿಯೋ ರೆಕಾರ್ಡಿಂಗ್ ಮಾಡುತ್ತಿರುವುದು ನ್ಯಾಯಾಲಯದ ಸಿಬ್ಬಂದಿಗೆ ಕಂಡುಬಂದಿತ್ತು.
ಸಂಬಂಧಪಟ್ಟ ನ್ಯಾಯಾಲಯದ ಸಿಬ್ಬಂದಿ ಆ ವ್ಯಕ್ತಿಯನ್ನು ಪ್ರಶ್ನಿಸಿದ್ದು ಅವರು ಪ್ರತಿವಾದಿ ಸಂಖ್ಯೆ 3 ಮತ್ತು 4 ರ ಸಂಬಂಧಿ ಎಂದು ತಿಳಿಸಿದ್ದರು. ಈ ನ್ಯಾಯಾಲಯದ ರಿಜಿಸ್ಟ್ರಿಯಿಂದ ಆಡಿಯೋ ರೆಕಾರ್ಡಿಂಗ್ ಮಾಡಲು ಅವರಿಗೆ ಯಾವುದೇ ಅನುಮತಿಯನ್ನು ನೀಡಿಲ್ಲ ಎಂದು ಅವರಿಗೆ ತಿಳಿಸಲಾಯಿತು. ಆದ್ದರಿಂದ ರಿಜಿಸ್ಟ್ರಿಯಿಂದ ಫೆಬ್ರವರಿ 13, 2017 ರಂದು ನೀಡಲಾದ ಸೂಚನೆಯ ಪ್ರಕಾರ, ಅವರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡು ಸ್ವಿಚ್ ಆಫ್ ಮಾಡಲಾಯಿತು ಮತ್ತು ನಂತರ ಸುರಕ್ಷಿತ ಕಸ್ಟಡಿಗಾಗಿ ರಿಜಿಸ್ಟ್ರಿಗೆ ರವಾನಿಸಲಾಯಿತು” ಎಂಬುದನ್ನು ನ್ಯಾಯಾಲಯವು ಗಮನಿಸಿದೆ.
ಪಟೇಲ್ ಅವರ ಸಂಬಂಧಿಕರನ್ನು (ಪ್ರಕರಣದಲ್ಲಿ ಪ್ರತಿವಾದಿಗಳು) ಪ್ರತಿನಿಧಿಸಿದ ನ್ಯಾಯಾಲಯದ ವಕೀಲರಾದ ಹಿತೇನ್ ವೆನೆಗಾವ್ಕರ್, ಕಲಾಪಗಳನ್ನು ಆಡಿಯೋ-ರೆಕಾರ್ಡ್ ಮಾಡಲು ಅವರಿಗೆ ಯಾವುದೇ ಅನುಮತಿಯನ್ನು ನೀಡಿಲ್ಲ ಮತ್ತು ಅವರ ನಡವಳಿಕೆಯನ್ನು ‘ಸಮರ್ಥಿಸಲು’ ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಆದಾಗ್ಯೂ, ಇದು ಅವರ ಮೊದಲ ಕೃತ್ಯವಾಗಿರುವುದರಿಂದ ಕರುಣೆ ತೋರಿಸುವಂತೆ ವೆನೆಗಾವ್ಕರ್ ನ್ಯಾಯಾಲಯವನ್ನು ವಿನಂತಿಸಿದ್ದು, ನಂತರ ಅವರ ದುರ್ವರ್ತನೆಗಾಗಿ ಮುಂಬೈನ ಹೈಕೋರ್ಟ್ ನೌಕರರ ವೈದ್ಯಕೀಯ ಕಲ್ಯಾಣ ನಿಧಿಗೆ 1 ಲಕ್ಷ ರೂಪಾಯಿ ವೆಚ್ಚವನ್ನು ಪಾವತಿಸಲು ಸೂಚಿಸಲಾಗಿದೆ.