
ಬೆಂಗಳೂರು: ಈ ಬಾರಿ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇರುವುದಿಲ್ಲ. ಕೃಷಿಗೆ 7 ಗಂಟೆ, ಇತರೆ ಉದ್ದೇಶಕ್ಕೆ 24 ಗಂಟೆ ವಿದ್ಯುತ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಬೇಸಿಗೆಯಲ್ಲಿ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಎಸ್ಕಾಂಗಳ ಮುಖ್ಯಸ್ಥರು, ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಬಾರಿ ಬೇಸಿಗೆಯಲ್ಲಿ ಗರಿಷ್ಠ ವಿದ್ಯುತ್ ಬಳಕೆ 19,000 ದಿಂದ 19,500 ಮೆಗಾ ವ್ಯಾಟ್ ಗೆ ಹೆಚ್ಚಳವಾಗುವ ಸಾಧ್ಯತೆಯಿದ್ದು, ವಿದ್ಯುತ್ ಬೇಡಿಕೆಯನ್ನು ಈಡೇರಿಸಲು ಇಂಧನ ಇಲಾಖೆ ಅನೇಕ ಕ್ರಮ ಕೈಗೊಂಡಿದೆ. ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಬೇಸಿಗೆಯಲ್ಲಿ ರೈತರ ಕೃಷಿ ಪಂಪ್ ಸೆಟ್ ಗಳಿಗೆ ದಿನದ 7 ಗಂಟೆ, ಇತರ ಉದ್ದೇಶಗಳಿಗೆ 24 ಗಂಟೆ ವಿದ್ಯುತ್ ಪೂರೈಕೆ ಮಾಡಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.