
ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾನಾ ಗ್ರಾಮದ ಬಳಿ ಗಡಿ ರಸ್ತೆ ಸಂಸ್ಥೆ (BRO) ನಿರ್ಮಾಣ ಸ್ಥಳದಲ್ಲಿ ಹಿಮಕುಸಿತ ಸಂಭವಿಸಿದ್ದು, 57 ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, 10 ಮಂದಿಯನ್ನು ರಕ್ಷಣೆ ಮಾಡಲಾಗಿದೆ.
ಭಾರೀ ಹಿಮಪಾತದಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸಂವಹನ ವ್ಯವಸ್ಥೆಗೂ ತೊಂದರೆಯಾಗಿದೆ. ಹೆಲಿಕಾಪ್ಟರ್ ಸೇವೆ ಬಳಸಲು ಸಾಧ್ಯವಾಗುತ್ತಿಲ್ಲ, ಉಪಗ್ರಹ ಫೋನ್ ಸೇರಿದಂತೆ ಸಂವಹನ ಸಾಧನಗಳ ಕೊರತೆಯಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಗರ್ವಾಲ್ 9 ಬ್ರಿಗೇಡ್, ಸೇನೆ, ITBP, BRO ಮತ್ತು SDRF ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿವೆ.
ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂದೀಪ್ ತಿವಾರಿ, “ಮಾನಾದಲ್ಲಿ ಹಿಮಕುಸಿತದ ವರದಿಗಳು ಬಂದಿವೆ. BRO ಯೋಜನಾ ಸ್ಥಳದಲ್ಲಿ ಹಿಮವನ್ನು ತೆರವುಗೊಳಿಸಲು ಶಿಬಿರ ಹೂಡಿದ್ದ 57 ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಭಾರೀ ಹಿಮಪಾತದಿಂದಾಗಿ, ಹೆಲಿಕಾಪ್ಟರ್ ಸೇವೆಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಅವರ ಬಳಿ ಸಂವಹನ ಸಾಧನಗಳ ಕೊರತೆಯಿದೆ” ಎಂದು ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಟ್ವೀಟ್ ಮಾಡಿ, “ಚಮೋಲಿ ಜಿಲ್ಲೆಯ ಮಾನಾ ಗ್ರಾಮದ ಬಳಿ BRO ನಿರ್ಮಾಣ ಕಾರ್ಯದ ಸಮಯದಲ್ಲಿ ಕಾರ್ಮಿಕರು ಹಿಮಕುಸಿತದಲ್ಲಿ ಸಿಲುಕಿರುವ ದುಃಖದ ಸುದ್ದಿ ಬಂದಿದೆ. ITBP, BRO ಮತ್ತು ಇತರ ರಕ್ಷಣಾ ತಂಡಗಳಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ಎಲ್ಲಾ ಕಾರ್ಮಿಕ ಸಹೋದರರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದ್ದಾರೆ.
ಬದರಿನಾಥ ಧಾಮದ ಸಮೀಪದಲ್ಲೇ ಹಿಮಕುಸಿತ ಸಂಭವಿಸಿದ್ದು, ಗೌಚಾರ್ ಮತ್ತು ಸಹಸ್ತ್ರಧಾರ (ಡೆಹ್ರಾಡೂನ್) ಪೋಸ್ಟ್‌ಗಳಲ್ಲಿನ ರಕ್ಷಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು SDRF ಅಧಿಕಾರಿಗಳು ತಿಳಿಸಿದ್ದಾರೆ.
“जनपद चमोली में माणा गांव के निकट BRO द्वारा संचालित निर्माण कार्य के दौरान हिमस्खलन की वजह से कई मजदूरों के दबने का दुःखद समाचार प्राप्त हुआ। ITBP, BRO और अन्य बचाव दलों द्वारा राहत एवं बचाव कार्य संचालित किया जा रहा है। भगवान बदरी विशाल से सभी श्रमिक भाइयों के सुरक्षित होने की… pic.twitter.com/0DpWxrx8lj
— Press Trust of India (@PTI_News) February 28, 2025