ರಾಯಚೂರು : ರಾಯಚೂರಿನ ಮಾನ್ವಿಯಲ್ಲಿ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿರುವ ಬೆನ್ನಲ್ಲೇ ಹಕ್ಕಿಜ್ವರದ ಶಂಕೆ ವ್ಯಕ್ತವಾಗಿದೆ. ಈ ಘಟನೆ ಬೆನ್ನಲ್ಲೇ ಇತ್ತ ಚಿಕ್ಕಬಳ್ಳಾಪುರದಲ್ಲಿ ಹಕ್ಕಿಜ್ವರ ಪತ್ತೆಯಾಗಿದ್ದು, 36 ಕೋಳಿಗಳು ಹಕ್ಕಿಜ್ವರದಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ.
ಜಿಲ್ಲೆಯ ವರದಹಳ್ಳಿಯ ದ್ಯಾವಪ್ಪ ಹಾಗೂ ರತ್ನಮ್ಮ ಎಂಬುವವರ ಮನೆಯಲ್ಲಿ 36 ಕೋಳಿಗಳು ರಾತ್ರಿ ಬೆಳಗಾವುವಷ್ಟರಲ್ಲಿ ಮೃತಪಟ್ಟಿದ್ದವು. ವಿಷ ಆಹಾರ ಸೇವನೆಯಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಪಶುಸಂಗೋಪನಾ ಇಲಾಖೆ ಕೋಳಿಗಳ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿತ್ತು. ಇದೀಗ ಲ್ಯಾಬ್ ವರದಿ ಜಿಲ್ಲಾಡಳಿತ ಹಾಗೂ ಪಶುಸಂಗೋಪನಾ ಇಲಾಖೆ ಕೈ ಸೇರಿದೆ.
ಹಕ್ಕಿಜ್ವರದಿಂದಲೇ ಕೋಳಿಗಳು ಮೃತಪಟ್ಟಿವೆ ಎಂಬುದು ದೃಢವಾಗಿದೆ. ವರದಹಳ್ಳಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಾದ್ಯಂತ ಔಷಧಿ ಸಂಪಡಿಸಲಾಗಿದೆ. ಕೋಳಿ ಸಾಕಿರುವವರ ಮನೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಯಚೂರಿನಲ್ಲಿ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.
ರಾಯಚೂರಿನ ಮಾನ್ವಿ ಸೇರಿದಂತೆ ಹಲವು ಕಡೆ ಹಕ್ಕಿಗಳು ಸಾವನ್ನಪ್ಪುತ್ತಿದೆ. ಕಾಗೆ, ಪಾರಿವಾಳ ಸೇರಿದಂತೆ ಹಲವು ಪಕ್ಷಿಗಳು ಸಾವನ್ನಪ್ಪುತ್ತಿದೆ.ನೆರೆಯ ರಾಜ್ಯಗಳಲ್ಲಿ ಹಕ್ಕಿಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ರಾಯಚೂರಿನ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಪಕ್ಷಿಗಳಿಗೆ ನೀರು ಕೊಟ್ಟರೂ ಕೂಡ ಪಕ್ಷಿಗಳು ನೀರು ಕುಡಿಯುತ್ತಿಲ್ಲ.ಎಂದು ಜನರು ಹೇಳುತ್ತಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲ್ಯಾಬ್ ವರದಿ ಬಂದ ಬಳಿಕ ಪಕ್ಷಿಗಳ ಸಾವಿಗೆ ಕಾರಣ ತಿಳಿದು ಬರಲಿದೆ.