
ಶಿವಮೊಗ್ಗ: ಮೃತಪಟ್ಟಿರುವುದಾಗಿ ವೈದ್ಯರು ದೃಢೀಕರಿಸಿದ ನಂತರವೂ ಮಹಿಳೆಯೊಬ್ಬರು ಕಣ್ಣು ಬಿಟ್ಟು ಉಸಿರಾಡಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ.
ಭದ್ರಾವತಿಯ ಗುತ್ತಿಗೆದಾರ ಸುಬ್ರಮಣಿ ಅವರ ಪತ್ನಿ ಮೀನಾಕ್ಷಿ(52) ಅವರನ್ನು ಅನಾರೋಗ್ಯದ ಕಾರಣ ಶಿವಮೊಗ್ಗದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ರಾತ್ರಿ ಮೀನಾಕ್ಷಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಮಂಗಳವಾರ ಬೆಳಿಗ್ಗೆ ಮೀನಾಕ್ಷಿ ಅವರನ್ನು ಭದ್ರಾವತಿಯ ಗಾಂಧಿನಗರದ ಮನೆಗೆ ಕರೆತಂದು ಇಳಿಸುವಾಗ ಕಣ್ತೆರೆದು ನೋಡಿ ಉಸಿರಾಡಿದ್ದಾರೆ.
ಅವರು ಮೃತಪಟ್ಟಿರುವ ಮಾಹಿತಿ ತಿಳಿದು ಅಂತಿಮ ದರ್ಶನಕ್ಕೆ ಬಂದಿದ್ದ ಬಂದು ಬಾಂಧವರಿಗೆ, ಮನೆಯವರಿಗೆ ಅಚ್ಚರಿಯಾಗಿದೆ. ಕೂಡಲೇ ಅವರಿಗೆ ನೀರು ಕುಡಿಸಿದ ಮನೆಯವರು ಸಮೀಪದ ಭದ್ರಾ ನರ್ಸಿಂಗ್ ಹೋಂಗೆ ಕರೆದೊಯ್ದು ಪರೀಕ್ಷಿಸಿದಾಗ ಅವರಿಗೆ ಜೀವ ಇರುವುದು, ಉಸಿರಾಡುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ನಂತರ ಅವರನ್ನು ಶಿವಮೊಗ್ಗದ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಯ ನಂತರ ಮೀನಾಕ್ಷಿ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.