alex Certify ವಸತಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್: ಪಾವತಿ ಮೊತ್ತಕ್ಕೆ ವಿನಾಯಿತಿ, ಹೆಚ್ಚುವರಿ ಹಣ ವಾಪಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಸತಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್: ಪಾವತಿ ಮೊತ್ತಕ್ಕೆ ವಿನಾಯಿತಿ, ಹೆಚ್ಚುವರಿ ಹಣ ವಾಪಸ್

ಶಿವಮೊಗ್ಗ: ಶಿವಮೊಗ್ಗ ಸಮೀಪದ ಗೋವಿಂದಾಪುರದಲ್ಲಿ 46 ಎಕರೆ ವಿಶಾಲ ಭೂಪ್ರದೇಶದಲ್ಲಿ ಸುಮಾರು 261.00ಕೋಟಿ ರೂ.ಗಳ ವೆಚ್ಚದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಜಿ+2 ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಿದ್ದ 3000 ಮನೆಗಳ ಪೈಕಿ 652 ಮನೆಗಳನ್ನು ಇಂದು ಹಂಚಿಕೆ ಮಾಡಲಾಗಿದೆ.

ರಾಜ್ಯ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಫಲಾನುಭವಿಗಳಿಗೆ ಮನೆಯ ಕೀಯನ್ನು ಹಸ್ತಾಂತರಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಗೋವಿಂದಾಪುರದಲ್ಲಿ ಏರ್ಪಡಿಸಲಾಗಿದ್ದ ಫಲಾನುಭವಿಗಳಿಗೆ ಲಾಟರಿ ಮೂಲಕ ಮನೆಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಜಮೀರ್ ಅಹಮ್ಮದ್ ಖಾನ್,  ಈ ಹಿಂದೆ ಸುಮಾರು 624 ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಲಾಗಿದೆ. ಈಗಾಗಲೇ ವಿತರಿಸಲಾದ ಮನೆಗಳ ಫಲಾನುಭವಿಗಳು ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಆಗಿರುವ ವಿಳಂಬದಿಂದಾಗಿ ಪ್ರತಿ ಮನೆಯ ವೆಚ್ಚದ ಜೊತೆಗೆ ಹೆಚ್ಚುವರಿಯಾಗಿ 2 ಲಕ್ಷ ರೂ. ಪಾವತಿಸಿರುವುದನ್ನು ಗಮನಿಸಲಾಗಿದ್ದು, ಈ ಎಲ್ಲಾ ಫಲಾನುಭವಿಗಳಿಗೆ ತಾವು ಪಾವತಿಸಿರುವ ಹೆಚ್ಚುವರಿ ಮೊತ್ತವನ್ನು ಮುಂದಿನ ಒಂದೂವರೆ ತಿಂಗಳೊಳಗಾಗಿ ಸರ್ಕಾರದ ವತಿಯಿಂದ ಹಿಂದಿರುಗಿಸಲಾಗುವುದು ಎಂದರು.

ರಾಜ್ಯದಲ್ಲಿ ಇದೇ ಯೋಜನೆಯಡಿ ನಿರ್ಮಾಣಗೊಳ್ಳಬೇಕಾಗಿದ್ದ 47,860 ಮನೆಗಳ ಕಾಮಗಾರಿ ಅಪೂರ್ಣಗೊಂಡಿದ್ದು, ಫಲಾನುಭವಿಗಳು ಸರ್ಕಾರಕ್ಕೆ ಪಾವತಿಸಬೇಕಾದ ಮೊತ್ತ 2700 ಕೋಟಿ ರೂ. ಬಾಕಿ ಇದೆ. ನಗರದ ಕೊಳಚೆ ನಿರ್ಮೂಲನೆ ಯೋಜನೆಯಡಿ ರಾಜ್ಯದಲ್ಲಿ 1,80,253 ಮನೆಗಳು ಮಂಜೂರಾಗಿದ್ದು, ಸದರಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಂದ ಸುಮಾರು 7400 ಕೋಟಿ ರೂ. ಮೊತ್ತ ಸರ್ಕಾರಕ್ಕೆ ಬರಬೇಕಾಗಿದೆ. ಅಲ್ಲದೇ ರಾಜೀವ್ ಗಾಂಧಿ ವಸತಿ ಯೋಜನೆಯಡಿ 7863 ಮನೆಗಳ ಫಲಾನುಭವಿಗಳಿಂದ ಸರ್ಕಾರಕ್ಕೆ 2100 ಕೋಟಿ ಮೊತ್ತ ಸಂದಾಯವಾಗಿದ್ದು, ಒಟ್ಟಾರೆಯಾಗಿ 9500 ಕೋಟಿಗೂ ಅಧಿಕ ಮೊತ್ತ ಸರ್ಕಾರಕ್ಕೆ ಪಾವತಿಯಾಗಬೇಕಾಗಿದೆ. ವಾಸ್ತವದಲ್ಲಿ ಈ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳು ಕಡುಬಡವರಾಗಿದ್ದು, ಹಣ ಹೊಂದಿಸುವುದು ಕಷ್ಟಕರವೆಂಬುದನ್ನು ಮನಗಂಡು ಪಾವತಿಸಬೇಕಾದ ಮೊತ್ತಕ್ಕೆ ರಿಯಾಯಿತಿ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ವಿನಂತಿಸಿಕೊಂಡಿರುವುದಾಗಿ ಅವರು ತಿಳಿಸಿದರು.

ಕಳೆದ ಸಾಲಿನಲ್ಲಿ 36,789 ಫಲಾನುಭವಿಗಳಿಗೆ 500 ಕೋಟಿ ರೂ.ಗಳ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿಕೊಡಲು ಉದ್ದೇಶಿಸಲಾಗಿದ್ದು, ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಅನುಮೋದನೆ ಪಡೆದು ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದ ಅವರು, ರಾಜ್ಯದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆ ಮತ್ತು ಕೊಳಚೆ ನಿರ್ಮೂಲನೆ ಯೋಜನೆಯಡಿ ಸುಮಾರು 2,30,000 ಮನೆಗಳನ್ನು ಹಂತಹಂತವಾಗಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಮೊದಲ ಹಂತದಲ್ಲಿ ಹುಬ್ಬಳ್ಳಿಯಲ್ಲಿ 4100ಮನೆಗಳ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಂಗಳೂರಿನಲ್ಲಿ 2016ರಲ್ಲಿ 2023 ಎಕರೆ ಭೂಪ್ರದೇಶದಲ್ಲಿ ವಸತಿ ರಹಿತರಿಗೆ ಮನೆ ನಿರ್ಮಿಸಿಕೊಡುವ ಬೃಹತ್ ಯೋಜನೆಯನ್ನು ರೂಪಿಸಿ ಭೂಮಿಯನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಿಸಲಾಗಿತ್ತು. ನಂತರದ ಸರ್ಕಾರಗಳ ಅವಧಿಯಲ್ಲಿ ಈ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗದಿರುವುದನ್ನು ಗಮನಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಅಂದು ಪ್ರತಿ ಮನೆಗೆ ನಿಗದಿಪಡಿಸಲಾದ್ದ 6 ಲಕ್ಷ ರೂ. ವೆಚ್ಚದ ಮೊತ್ತವಲ್ಲದೇ ಹೆಚ್ಚುವರಿಯಾಗಿ 3.50 ಲಕ್ಷ ರೂ.ಪಾವತಿಸಬೇಕಾಗಿದೆ. ಇದು ಜನಸಾಮಾನ್ಯರಿಗೆ ಕಷ್ಟಕರವೆಂಬುದನ್ನು ಮನವರಿಕೆ ಮಾಡಿಕೊಂಡ ಮುಖ್ಯಮಂತ್ರಿಗಳು ಪ್ರತಿ ಫಲಾನುಭವಿಗಳಿಗೆ 1 ಲಕ್ಷ ರೂ. ಮೊತ್ತದ ವಿನಾಯಿತಿ ನೀಡಲು ಉದ್ದೇಶಿಸಿರುವುದಾಗಿ ಅವರು ತಿಳಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...