
ಪ್ರತಾಪ್ಗಢ: ಉತ್ತರ ಪ್ರದೇಶದ ಪ್ರತಾಪ್ಗಢ ಜಿಲ್ಲೆಯಲ್ಲಿ ಶಾಲಾ ಶುಲ್ಕ ಪಾವತಿಸದ ಕಾರಣ ಬೋರ್ಡ್ ಪರೀಕ್ಷೆಯ ಪ್ರವೇಶ ಪತ್ರ ನಿರಾಕರಿಸಿದ್ದಕ್ಕೆ ಮನನೊಂದ 12 ನೇ ತರಗತಿಯ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಭಾನುವಾರ-ಸೋಮವಾರದ ಮಧ್ಯರಾತ್ರಿ ಜೇತ್ವಾರ ಪೊಲೀಸ್ ಠಾಣೆ ವ್ಯಾಪ್ತಿಯ ಅಖೌ ನೌಬಸ್ತಾ ಗ್ರಾಮದಲ್ಲಿ ವಿದ್ಯಾರ್ಥಿ ತನ್ನ ಮನೆಯ ಹಿಂದಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಮೃತರ ತಂದೆ ಸಲ್ಲಿಸಿದ ದೂರಿನ ಆಧಾರದ ಮೇಲೆ ಪೊಲೀಸರು ಶಾಲಾ ವ್ಯವಸ್ಥಾಪಕ ಮತ್ತು ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಶುಲ್ಕಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಶಾಲೆಯು ನಿರ್ವಹಿಸುವ ರೀತಿ ಮತ್ತು ಬೋರ್ಡ್ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಅಪಾರ ಒತ್ತಡವನ್ನು ಅನೇಕರು ಪ್ರಶ್ನಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಖೌ ನೌಬಸ್ತಾ ನಿವಾಸಿ ರಾಜೇಂದ್ರ ಸಿಂಗ್ ದೂರು ದಾಖಲಿಸಿದ್ದು, ಅವರ ಮಗ ಶಿವಂ ಸಿಂಗ್(18) ಧನ್ಸಾರಿ(ಜೇತ್ವಾರ) ದಲ್ಲಿರುವ ಸಾಧುರಿ ಶಿರೋಮಣಿ ಇಂಟರ್ ಕಾಲೇಜಿನಲ್ಲಿ ಇಂಟರ್ಮೀಡಿಯೇಟ್ ವಿದ್ಯಾರ್ಥಿಯಾಗಿದ್ದಾನೆ. ಆರ್ಥಿಕ ಸಂಕಷ್ಟದಿಂದಾಗಿ ಮಗನ ಶುಲ್ಕ ಪಾವತಿಸಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ(ಪಶ್ಚಿಮ) ಸಂಜಯ್ ರೈ ತಿಳಿಸಿದ್ದಾರೆ.
ತನ್ನ ಮಗ ಬೋರ್ಡ್ ಪರೀಕ್ಷೆಗೆ ಪ್ರವೇಶ ಪತ್ರ ಪಡೆಯಲು ಹೋಗಿದ್ದ. ಆದರೆ ಕಾಲೇಜು ಆಡಳಿತ ಮಂಡಳಿಯು ಶುಲ್ಕ ಪಾವತಿಸಿ ಎಂದು ಕಳುಹಿಸಿತ್ತು. ಇದರಿಂದ ಬೇಸರಗೊಂಡ ಶಿವಂ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರಾಜೇಂದ್ರ ಸಿಂಗ್ ಆರೋಪಿಸಿದ್ದಾರೆ.
ದೂರಿನ ಆಧಾರದ ಮೇಲೆ ಸಾಧುರಿ ಶಿರೋಮಣಿ ಇಂಟರ್ ಕಾಲೇಜಿನ ವ್ಯವಸ್ಥಾಪಕ ಮತ್ತು ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸಂಜಯ್ ರೈ ಹೇಳಿದ್ದಾರೆ..
ಉತ್ತರ ಪ್ರದೇಶ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಸೋಮವಾರ ಪ್ರಾರಂಭವಾಗಿವೆ, 54 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು.