
ಬೆಳಗಾವಿ: ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಮೇಲೆ ಎಂಇಎಸ್ ಪುಂಡರಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಮಾರಿಹಾಳ ಠಾಣೆ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಎರಡು ದಿನಗಳ ಹಿಂದೆ ಕೆ.ಎಸ್.ಆರ್ ಟಿ.ಸಿ ಬಸ್ ನಲ್ಲಿ ಟಿಕೆಟ್ ಕೊಡುವ ವೇಳೆ ಕಂಡಕ್ಟರ್ ಮಹದೇವಪ್ಪ ತನಗೆ ಮರಾಠಿ ಬರಲ್ಲ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ್ದಕ್ಕೆ ಬಸ್ ನಲ್ಲಿದ್ದ ಮರಾಠಿ ಪುಂಡರು ಕಂಡಕ್ಟರ್ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ, ಮರಾಠಿ ಮಾತನಾಡುವಂತೆ ಒತ್ತಾಯಿಸಿದ್ದರು. ಹಲ್ಲೆಗೊಳಗಾದ ಕಂಡಕ್ಟರ್ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಈಗಾಗಲೇ ಮಾರಿಹಾಳ ಠಾಣೆ ಪೊಲೀಸರು ಹಲ್ಲೆ ನಡೆಸಿದ್ದ ಓರ್ವ ಅಪ್ರಾಪ್ತ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಇಂದು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. 25 ವರ್ಷದ ಮೋಹನ್ ಹಂಚಿನಮನಿ ಬಂಧಿತ ಆರೋಪಿ.
ಇನ್ನು ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣದ ಬೆನ್ನಲ್ಲೇ ಬೆಳಗಾವಿ ಹಾಗೂ ಮಹಾರಾಷ್ಟ್ರ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಸ್ ಸಂಚಾರ ಸ್ಥಗಿತಗೊಂಡಿದೆ.