
ಬೆಂಗಳೂರು: ಯುವತಿ ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಆಕೆಯ ಮನೆಯ ಬೈಕ್-ಕಾರುಗಳಿಗೆ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ ಚನ್ನಮ್ಮನಕೆರೆಯ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ನಡೆದಿದೆ.
ರಾಹುಲ್ ಎಂಬ ಯುವಕ ಈ ಕೃತ್ಯವೆಸಗಿದ್ದಾನೆ. ರಾಹುಲ್ ಪ್ರೀತಿಸುತ್ತಿದ್ದ ಯುವತಿ ಆತನ ಪ್ರೀತಿಯನ್ನು ಒಪ್ಪಿಕೊಂಡಿಲ್ಲ. ಇದರಿಂದ ಕೋಪಗೊಂಡ ರಾಹುಲ್, ತನ್ನ ಸ್ನೇಹಿತನೊಂದಿಗೆ ಆಕೆ ವಾಸವಾಗಿರುವ ಅಪಾರ್ಟ್ ಮೆಂಟ್ ಬಳಿ ತೆರಳಿ, ಯುವತಿಯ ತಂದೆಗೆ ಸೇರಿದ ಕಾರು, ಬೈಕ್ ಗಳಿಗೆ ಬೆಂಕಿ ಹಚ್ಚಿದ್ದಾನೆ. ತಡೆಯಲು ಬಂದ ಭದ್ರತಾ ಸಿಬ್ಬಂದಿಗಳ ಮೇಲೂ ಹಲ್ಲೆ ನಡೆಸಿದ್ದಾನೆ.
ಎರಡು ಕಾರು, ಬೈಕ್ ಗಳು ಬೆಂಕಿಯಲ್ಲಿ ಹೊತ್ತಿ ಉರಿದಿವೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಪಾರ್ಟ್ ಮೆಂಟ್ ನ ಯುವತಿಯ ಮನೆಗೂ ನುಗ್ಗಲು ರಾಹುಲ್ ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.