ಥೈಲ್ಯಾಂಡ್‌ನ ಪಟ್ಟಾಯ ಬೀಚ್‌ನಲ್ಲಿ ಶುಕ್ರವಾರ (ಫೆಬ್ರವರಿ 21) ನಡೆದ ಗಲಾಟೆಯೊಂದು ಭಾರೀ ಸುದ್ದಿಯಾಗಿದೆ. ಇಬ್ಬರು ಭಾರತೀಯ ಪ್ರವಾಸಿಗರು ಇಬ್ಬರು ಥಾಯ್ ಯುವತಿಯರಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಈ ಘಟನೆ ನಡೆದಿದೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಸ್ಥಳೀಯ ನಿವಾಸಿಗಳು ಮತ್ತು ಟ್ಯಾಕ್ಸಿ ಚಾಲಕರು ಮಧ್ಯಪ್ರವೇಶಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಸಂಪೂರ್ಣ ಘಟನೆ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ದೊಣ್ಣೆ ಹಿಡಿದ ಯುವತಿಯೊಬ್ಬರು ಕಪ್ಪು ಅಂಗಿ ಧರಿಸಿದ ಭಾರತೀಯ ವ್ಯಕ್ತಿಯನ್ನು ಬೆನ್ನಟ್ಟುತ್ತಿರುವುದು ಕಂಡುಬಂದಿದೆ.
ಪಟ್ಟಾಯ ಮೇಲ್ ವರದಿಯ ಪ್ರಕಾರ, ಈ ಘಟನೆಯಲ್ಲಿ ಭಾಗಿಯಾದ ಇಬ್ಬರು ಯುವತಿಯರು ತಮ್ಮ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ತಾವು ಬೀಚ್ ಬಳಿ ಇದ್ದಾಗ ಇಬ್ಬರು ಭಾರತೀಯ ಪುರುಷರು ತಮ್ಮನ್ನು ಅಸಭ್ಯವಾಗಿ ಸಮೀಪಿಸಿದರು ಎಂದು ಅವರು ಹೇಳಿದ್ದಾರೆ. ಅವರ ಒಪ್ಪಿಗೆಯಿಲ್ಲದೆ ಆ ವ್ಯಕ್ತಿ ಅವರ ವಿಡಿಯೊ ಚಿತ್ರೀಕರಿಸಲು ಪ್ರಾರಂಭಿಸಿದನು. ಇದರಿಂದ ಅವರು ಮುಜುಗರಕ್ಕೊಳಗಾದರು. ವಿಡಿಯೊವನ್ನು ಅಳಿಸುವಂತೆ ಕೇಳಿದಾಗ, ಮಾತಿನ ಚಕಮಕಿ ನಡೆದು ಹೊಡೆದಾಟಕ್ಕೆ ತಿರುಗಿದೆ.
ಪಟ್ಟಾಯ ಪೊಲೀಸ್ ಠಾಣೆಯ ಪೊಲ್ ಮೇಜರ್ ಕರ್ನಲ್ ನೊಂಗ್ಸಾಕ್ ಇನ್‌ಫಾಡುಂಗ್ ವರದಿಯ ಪ್ರಕಾರ, ಇಬ್ಬರು ಥಾಯ್ ಯುವತಿಯರು, ಇಬ್ಬರು ಭಾರತೀಯ ಪುರುಷರು ಮತ್ತು ಮಧ್ಯಪ್ರವೇಶಿಸಿದ ಮೋಟಾರ್‌ಸೈಕಲ್ ಟ್ಯಾಕ್ಸಿ ಚಾಲಕ ಸೇರಿದಂತೆ ಐದು ಜನರು ಗಾಯಗೊಂಡಿದ್ದಾರೆ. ಟ್ಯಾಕ್ಸಿ ಚಾಲಕನ ಕಾಲಿಗೆ ತಿರುಚಿದ ಗಾಯ ಮತ್ತು ಕಣ್ಣಿಗೆ ಗಾಯವಾಗಿದೆ. ಪೊಲೀಸರು ನ್ಯಾಯೋಚಿತ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ಮುಂದುವರಿಸಿದ್ದಾರೆ.