alex Certify ಮೇಘಾಲಯ ರಾಜಭವನಕ್ಕೆ ಪದ್ಮಶ್ರೀ ಪುರಸ್ಕೃತ ಕಲಾವಿದೆ ಭೀಮವ್ವಗೆ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇಘಾಲಯ ರಾಜಭವನಕ್ಕೆ ಪದ್ಮಶ್ರೀ ಪುರಸ್ಕೃತ ಕಲಾವಿದೆ ಭೀಮವ್ವಗೆ ಆಹ್ವಾನ

ಕೊಪ್ಪಳ: 2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಭಾಜನರಾದ ಕೊಪ್ಪಳ ಜಿಲ್ಲೆಯ ಮೋರನಾಳ ಗ್ರಾಮದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ ಅವರ ಮನೆಗೆ ಶನಿವಾರದಂದು ಮೇಘಾಲಯ ರಾಜ್ಯದ ರಾಜ್ಯಪಾಲ ಸಿ.ಹೆಚ್. ವಿಜಯಶಂಕರ್ ಅವರು ಭೇಟಿ ನೀಡಿ ಗೌರವಿಸಿದ್ದಾರೆ.

ಭೀಮವ್ವ ಶಿಳ್ಳೆಕ್ಯಾತರ ಅವರಿಗೆ ರಾಜ್ಯಪಾಲರು ಸನ್ಮಾನಿಸಿ, ಅಭಿನಂದಿಸಿದರು. ರಾಮಾಯಣ ಮತ್ತು ಮಹಾಭಾರತದ ಕಥೆಯನ್ನು ಹೇಳುವ ತೊಗಲು ಗೊಂಬೆಯಾಟದ ಕೆಲವು ಹಾಡುಗಳನ್ನು ಭೀಮವ್ವ ಶಿಳ್ಳೆಕ್ಯಾತರ ಕುಟುಂಬದವರು ರಾಜ್ಯಪಾಲರ ಎದುರುಗಡೆ ಹಾಡಿ ಗಮನ ಸೆಳೆದರು.

ಈ ಕಲೆಯನ್ನು ನಾವು ಸುಮಾರು ನಾಲ್ಕು ತಲೆಮಾರುಗಳಿಂದ, ನಮ್ಮ ತಾತ, ಮುತ್ತಾತ, ಅಜ್ಜಂದಿರ ಕಾಲದಿಂದ ಉಳಿಸಿ ಬೆಳೆಸಿಕೊಂಡು ಬಂದಿದ್ದೇವೆ. ನಮ್ಮ ಈ ಕಲೆಗೆ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀ ಪ್ರಶಸ್ತಿ ಸಂದಿರುವುದು ಅತೀವ ಸಂತಸ ತಂದಿದೆ. ಈ ಪ್ರಶಸ್ತಿ ನೀಡಿದ ಸರ್ಕಾರಕ್ಕೆ ಅಭಿನಂದನೆಗಳು ಎಂದರು.

ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಹೇಳುವ ತೊಗಲು ಗೋಂಬೆಯಾಟದ ಕೆಲವು ಹಾಡುಗಳನ್ನು ವೀಕ್ಷಿಸಿದ ನಂತರ ರಾಜ್ಯಪಾಲರು, ಈ ಕಲೆಯ ಪ್ರದರ್ಶನವನ್ನು ಮೇಘಲಾಯದ ರಾಜಭವನದಲ್ಲಿನ ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ಈ ಕಲಾವಿದರನ್ನು ಆಹ್ವಾನಿಸಿ, ಕಾರ್ಯಕ್ರಮ ಆಯೋಜನೆ ಮಾಡುವಂತೆ ತಮ್ಮ ವಿಶೇಷ ಕರ್ತವ್ಯಾಧಿಕಾರಿಗೆ ನಿರ್ದೇಶನ ನೀಡಿದರು. ಈ ಕಲೆಯನ್ನು ತಮ್ಮ ಮುಂದಿನ ತಲೆಮಾರಿಗೂ ಹೀಗೆ ಉಳಿಸಿ, ಬೆಳೆಸಿಕೊಂಡು ಹೋಗಬೇಕೆಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಮಾಜಿ ಶಾಸಕ ಬಸವರಾಜ ದಢೇಸೂಗೂರು, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೊಪ್ಪಳ ತಹಶೀಲ್ದಾರ ವಿಠ್ಠಲ್ ಚೌಗಲಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಜನಪ್ರತಿನಿಧಿಗಳು, ಮೋರನಾಳ ಗ್ರಾಮಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...