
ಬೆಂಗಳೂರು: ಮೊಬೈಲ್ ಕದಿಯಲು ಮುಂದಾದ ವೇಳೆ ವಿರೋಧಿಸಿದ ವ್ಯಕ್ತಿಗೆ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಕಾಮಾಕ್ಷಿಪಾಳ್ಯದ ವೃಷಭಾವತಿ ನಗರ ನಿವಾಸಿ ಚಂದ್ರ(45) ಕೊಲೆಯಾದ ವ್ಯಕ್ತಿ. ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪೇಗೌಡ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ 15ನೇ ಫ್ಲಾಟ್ ಫಾರಂನಲ್ಲಿ ಗುರುವಾರ ಮಧ್ಯಾಹ್ನ ಘಟನೆ ನಡೆದಿದೆ.
ಮೈಸೂರು ಮೂಲದ ಚಂದ್ರ ಅನೇಕ ವರ್ಷಗಳಿಂದ ಕಾಮಾಕ್ಷಿಪಾಳ್ಯದಲ್ಲಿ ನೆಲೆಸಿದ್ದು, ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಎರಡು ದಿನ ಕೆಲಸಕ್ಕೆ ಹೋಗದ ಚಂದ್ರ ಗುರುವಾರ ಮಧ್ಯಾಹ್ನ ಮದ್ಯ ಸೇವಿಸಿ ಮೆಜೆಸ್ಟಿಕ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಟರ್ಮಿನಲ್ ಒಂದರ 15ನೇ ಪ್ಲಾಟ್ಫಾರಂನಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಆಸನದ ಮೇಲೆ ಮಲಗಿದ್ದಾರೆ.
ಅಲ್ಲಿಗೆ ಬಂದ ಇಬ್ಬರು ದುಷ್ಕರ್ಮಿಗಳು ಚಂದ್ರ ಅವರ ಜೇಬಿನಿಂದ ಮೊಬೈಲ್ ಕದಿಯಲು ಪ್ರಯತ್ನಿಸಿದಾಗ ಎಚ್ಚರಗೊಂಡ ಅವರು ಬಿಗಿಯಾಗಿ ಮೊಬೈಲ್ ಹಿಡಿದುಕೊಂಡು ವಿರೋಧಿಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಏಕಾಏಕಿ ಚಾಕು ತೆಗೆದು ಚಂದ್ರ ಅವರ ಎದೆ, ಮುಖ, ಒಟ್ಟಿಗೆ ಇರಿದು ಪರಾರಿಯಾಗಿದ್ದಾರೆ. ಉಪ್ಪಾರಪೇಟೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿ ಕ್ಯಾಮರಾ ದೃಶ್ಯ ಪರಿಶೀಲಿಸಿದ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.