ಬೆಂಗಳೂರು : ರಾಜ್ಯದ 1-10 ನೇ ತರಗತಿ ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ-ಬಾಳೆಹಣ್ಣು ವಿತರಣೆ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 01 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕಾಂಶ ಆಹಾರವಾಗಿ ಮೊಟ್ಟೆ ಅಥವಾ ಬಾಳೆಹಣ್ಣನ್ನು ಮಾತ್ರ ವಿತರಿಸಲು ಉಲ್ಲೇಖಿತ ಸರ್ಕಾರದ ಆದೇಶದಲ್ಲಿ ಅನುಮತಿ ನೀಡಿ ಆದೇಶಿಸಲಾಗಿದೆ.
ಶಾಲೆಗಳಲ್ಲಿ ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗೆ ವಿತರಣೆ ಮಾಡುತ್ತಿದ್ದ ಚಿಕ್ಕಿಯನ್ನು ಇನ್ನು ಮುಂದೆ, ವಿತರಣೆ ಮಾಡುವುದನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಿದೆ. ಅದರಂತೆ ಇನ್ನು ಮುಂದೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 01 ರಿಂದ 10ನೇ ತರಗತಿವರೆಗೆ ವಾರದಲ್ಲಿ ಎರಡು ದಿನ ಸರ್ಕಾರದ ವತಿಯಿಂದ ನೀಡುವ ಪೂರಕ ಪೌಷ್ಠಿಕ ಆಹಾರ ಹಾಗೂ ಅಜೀಂ ಪ್ರೇಮ್ ಜೀ ಪೌಂಡೇಶನ್ ವತಿಯಿಂದ ವಾರದಲ್ಲಿ ಉಳಿದ ನಾಲ್ಕು ದಿನಗಳಿಗೆ ನೀಡುವ ಪೂರಕ ಪೌಷ್ಠಿಕ ಆಹಾರದಲ್ಲಿ ಮೊಟ್ಟೆಯನ್ನು ನೀಡಲು, ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗೆ ಬಾಳೆಹಣ್ಣನ್ನು ಮಾತ್ರ ವಿತರಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಶಾಲೆಗಳಲ್ಲಿ ಪೂರಕ ಪೌಷ್ಠಿಕ ಆಹಾರವಾಗಿ ಚಿಕ್ಕಿಯನ್ನು ವಿತರಿಸದಂತೆ ಸೂಕ್ತ ಕ್ರಮ ವಹಿಸಲು ಶಾಲಾ ಮುಖ್ಯ ಶಿಕ್ಷಕರಿಗೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಗೆ ಸೂಚಿಸುವಂತೆ ರಾಜ್ಯದ ಎಲ್ಲಾ ಶಿಕ್ಷಣಾಧಿಕಾರಿಗಳು ಪಿಎಂ ಪೋಷಣ್ ಹಾಗೂ ತಾಲ್ಲೂಕು ಸಹಾಯಕ ನಿರ್ದೇಶಕರು ಪಿ.ಎಂ. ಪೋಷಣ್ ಇವರುಗಳಿಗೆ ಈ ಮೂಲಕ ಸೂಚನೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.



