
ರಾಯಚೂರು: ರಾಯಚೂರು ಜಿಲ್ಲೆ ಲಿಂಗಸುಗೂರಿನಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ ಕೃಷಿ ಇಲಾಖೆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಸಹಾಯಕ ಕೃಷಿ ನಿರ್ದೇಶಕಿ ನಾಗರತ್ನ ಹುಲಿಕೋಟಿ, ಕೃಷಿ ಅಧಿಕಾರಿ ಸಿದ್ದಪ್ಪ ಬಾಚಿಹಾಳ ಅವರನ್ನು ಅಮಾನತು ಮಾಡಲಾಗಿದೆ. 2024- 25 ನೇ ಸಾಲಿನ ನರೇಗಾ ಯೋಜನೆಯಡಿ ಜಮೀನುಗಳಿಗೆ ಬದು ನಿರ್ಮಾಣ ಮಾಡದೆ ನಕಲಿ ಬಿಲ್ ಗಳನ್ನು ಸೃಷ್ಟಿಸಿ ಎರಡು ಕೋಟಿ ಅವ್ಯವಹಾರ ನಡೆಸಿದ್ದರು.
ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿತ್ತು. ನಾಗರತ್ನ ಹುಲಿಕೋಟಿ ಮತ್ತು ಸಿದ್ದಪ್ಪ ಬಾಚಿಹಾಳ ಹಗರಣದಲ್ಲಿ ನೇರವಾಗಿ ಭಾಗಿಯಾಗಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರದಿ ಆಧಾರದ ಮೇಲೆ ಕೃಷಿ ಇಲಾಖೆ ಅಧೀನ ಕಾರ್ಯದರ್ಶಿ ಎಂ. ಇಂದ್ರ ಇಬ್ಬರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.