
ತಿರುವನಂತಪುರಂ: ರಾಜ್ಯಗಳ ಅಧಿಕಾರಕ್ಕೆ ಕತ್ತರಿ ಪ್ರಯೋಗಿಸುವ ಮತ್ತು ಉದ್ಯಮಿಗಳನ್ನು ಉಪ ಕುಲಪತಿಗಳನ್ನಾಗಿ ನೇಮಿಸುವ ಯುಜಿಸಿ ನೀತಿಯ ವಿರುದ್ಧ ದಕ್ಷಿಣದ ರಾಜ್ಯಗಳು ಮತ್ತೆ ಒಗ್ಗಟ್ಟು ಪ್ರದರ್ಶಿಸಿದ್ದು, ಕೇರಳದಲ್ಲಿ ಸಭೆ ನಡೆಸಿ ಯುಜಿಸಿ ನೀತಿಯನ್ನು ವಿರೋಧಿಸಿವೆ.
ಶಿಕ್ಷಣ ಕ್ಷೇತ್ರಕ್ಕೆ ಸೇರದ ಉದ್ಯಮಿಗಳನ್ನು ಕುಲಪತಿಗಳನ್ನಾಗಿ ನೇಮಕ ಮಾಡುವ ಅಧಿಕಾರ ನೀಡುವ ಯುಜಿಸಿಯ ನಿಯಂತ್ರಣ ನಿಯಮ ಬಳಿ ವಿರುದ್ಧ ದಕ್ಷಿಣ ರಾಜ್ಯಗಳು ಮತ್ತೆ ಒಗ್ಗಟ್ಟು ಪ್ರದರ್ಶಿಸಿವೆ. ಬೆಂಗಳೂರಿನ ನಂತರ ತಿರುವನಂತಪುರದಲ್ಲಿ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್, ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಸೇರಿದಂತೆ ಹಲವು ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೊಸ ನಿಯಮ ಉನ್ನತ ಶಿಕ್ಷಣದಲ್ಲಿ ರಾಜ್ಯ ಸರ್ಕಾರದ ಪಾತ್ರವನ್ನು ಕಡಿಮೆ ಮಾಡುತ್ತದೆ. ರಾಜ್ಯವನ್ನು ಸಂಪೂರ್ಣ ಮೂಲೆ ಗುಂಪು ಮಾಡುವಂತಿದೆ. ಯುಜಿಸಿ ಕರಡು ನಿಯಮಗಳಲ್ಲಿ ಕುಲಪತಿಗಳು, ಸಹ ಪ್ರಾಧ್ಯಾಪಕರ ನೇಮಕದಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರ ಇರುವುದಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.