
ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಮತ್ತೆ ಸಿಡಿದೆದ್ದಿದ್ದಾರೆ. ನನಗೆ ನೋಟಿಸ್ ಬಂದಿದೆ ಅಂತ ಹೇಳಲು ವಿಜಯೇಂದ್ರ ಯಾರು ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ನನಗೆ ನೋಟಿಸ್ ಬಂದಿದೆ ಅಂತ ವಿಜಯೇಂದ್ರಗೆ ಹೇಗೆ ಗೊತ್ತು? ಹಾಗಾದರೆ ವಿಜಯೇಂದ್ರ ತಾನೆ ನೋಟಿಸ್ ಹಿಂದಿರುವ ಶಕ್ತಿ ಎಂದು ಕಿಡಿಕಾರಿದ್ದಾರೆ.
ಎರಡು ಬಾರಿ ಫೇಕ್ ನೋಟಿಸ್ ರಿಲೀಸ್ ಮಾಡಿಸಿದ್ದೇ ವಿಜಯೇಂದ್ರ. ಈಗಿನ ನೋಟಿಸ್ ಬಗ್ಗೆ ನಾನು ಏನೂ ಹೇಳಲ್ಲ. ನೋಟಿಸ್ ಬರುವ ಮುನ್ನವೇ ಲೀಕ್ ಆಗಿದೆ. ಲೀಕ್ ಮಾಡಿಸಿದ್ದು ಯಾರು? ನೋಟಿಸ್ ಗೆ ಉತ್ತರ ಕೊಡುವ ಬಗ್ಗೆ ಹೇಳಲು ವಿಜಯೇಂದ್ರ ಯಾರು? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಇಂದು ಅಸಮಾಧಾನಿತ ಬಿಜೆಪಿ ನಾಯಕರು ಮತ್ತೆ ಪ್ರತ್ಯೇಕ ಸಭೆ ನಡೆಸುತ್ತಿದ್ದು, ಇಂದಿನ ಸಭೆಯಲ್ಲಿ ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.