
ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಭೂ ಕಬಳಿಕೆ ಆರೋಪ ಕೇಳಿಬಂದಿದ್ದು, ಅಧಿಕಾರಿಗಳು ಜಮೀನು ಸರ್ವೆ ಕಾರ್ಯ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ನಾನು ಯಾವುದೇ ಭೂ ಕಬಳಿಕೆ ಮಾಡಿಲ್ಲ, ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದಿದ್ದಾರೆ.
ನಾನು ಯಾರ ಭೂಮಿಯನ್ನೂ ನುಂಗಿಲ್ಲ. ನಾನು 40 ವರ್ಷಗಳ ಹಿಂದೆ ಖರೀದಿಸಿದ್ದ ಜಮೀನನ್ನು ಈಗಿನ ಸರ್ಕಾರ ತನಿಖೆ ಮಾಡುತ್ತಿದೆ. ಹತ್ತಾರು ಬಾರಿ ಸರ್ವೆಯಾಗಿದೆ. ಹತ್ತಾರು ಬಾರಿ ತನಿಖೆಯನ್ನು ನಡೆಸಿದ್ದಾರೆ. 40 ವರ್ಷಗಳಿಂದ ನನ್ನ ಬಳಿ ಯಾರೂ ಬಂದು ಕೇಳಿಲ್ಲ. ಈಗ ಇದ್ದಕ್ಕಿದ್ದಂತೆ ಹೇಗೆ ಉದ್ಭವವಾದರು? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನವರು ನಿನ್ನೆ ಯಾರನ್ನೋ ಕರೆದುಕೊಂಡು ಬಂದು ಕೆಲ ಪ್ರತಿಕ್ರಿಯೆಗಳನ್ನು ಕೊಡಿಸಿದ್ದಾರೆ. ಇಷ್ಟು ವರ್ಷ ಇಲ್ಲದವರು ಈಗ ಏಕಾಏಕಿ ಆರೋಪಗಳನ್ನು ಮಾಡುತ್ತಿದ್ದಾರೆ. ನಾನು ಖರೀದಿಸಿದ ಜಮೀನಿನ ಬಗ್ಗೆ ನನ್ನ ಬಳಿ ದಾಖಲೆಗಳು ಇವೆ. ನಾನು ಕೇತಗಾನಹಳ್ಳಿಯಲ್ಲಿ ಖರೀದಿಸಿದ ಭೂಮಿಯಲ್ಲಿ ಯಾವುದೇ ರೀತಿ ಅಕ್ರಮ ಚಟುವಟಿಕೆ ನಡೆಸಿಲ್ಲ. ರಾಜ್ಯದ ಸಂಪತ್ತು ರಕ್ಷಿಸುವವರಂತೆ ಪೋಸು ನೀಡುವ ಎಸ್.ಆರ್.ಹಿರೇಮಠ ಜಮೀನು ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಹೈಕೋರ್ಟ್ ನಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಹೇಳಿದರು.