ಬೆಂಗಳೂರು: ಗೃಹಲಕ್ಷ್ಮೀ, ಅನ್ನಭಾಗ್ಯ ಹಣ ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡದೇ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ರಾಜ್ಯದ ಜನರು ಒಂದೆಡೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಸಚಿವರುಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ. ಸರ್ಕಾರದ ನಡೆಗೆ ರಾಜ್ಯ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಗೃಹಲಕ್ಷ್ಮಿ, ಅನ್ನಭಾಗ್ಯ ಹಣ ತಿಂಗಳ ಸಂಬಳ ಅಲ್ವಲ್ಲ ಎಂದಿರುವ ಸಚಿವ ಕೆ.ಜೆ.ಜಾರ್ಜ್ ಹೇಳಿಕೆಗೆ ಕಿಡಿಕಾರಿರುವ ವಿಪಕ್ಷ ನಾಯಕ ಆರ್.ಅಶೋಕ್, ಇದೇನಾ ಮತದಾರರಿಗೆ ನೀವು ಕೊಡುವ ಗೌರವ? ಎಂದು ಪ್ರಶ್ನಿಸಿದ್ದಾರೆ.
ಗೃಹಲಕ್ಷ್ಮಿ ಹಣ ಕೊಡಿ, ಅನ್ನಭಾಗ್ಯದ ಹಣ ಕೊಡಿ ಅಂತ ಮಾತಾದರರೇನು ನಿಮ್ಮ ಬಳಿ ಭಿಕ್ಷೆ ಬೇಡುತ್ತಿಲ್ಲ. ಈ ಗ್ಯಾರೆಂಟಿ ಯೋಜನೆಗಳನ್ನು ಪ್ರಾರಂಭಿಸಿ ಅಂತ ಜನತೆ ಕೇಳಿಯೂ ಇರಲಿಲ್ಲ.
ನಿಮ್ಮ ಕಾಂಗ್ರೆಸ್ ಪಕ್ಷದ ಅಧಿಕಾರದ ತೆವಲಿಗೆ ಬೇಕಾಬಿಟ್ಟಿ ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡಿ ಈಗ ಮತದಾರರ ಬಗ್ಗೆ ಕೀಳಾಗಿ ಯಾಕೆ ಮಾಡುತ್ತೀರಿ? ನಿಮ್ಮ ಕೈಲಾದರೆ ಕೊಟ್ಟ ಮಾತಿನಂತೆ ಗ್ಯಾರೆಂಟಿ ಯೋಜನೆಗಳನ್ನು ಗೌರವದಿಂದ ಜಾರಿ ಮಾಡಿ. ನಿಮ್ಮ ಕೈಲಾಗದಿದ್ದರೆ ಬಿಟ್ಟುಬಿಡಿ. ಗ್ಯಾರೆಂಟಿ ಯೋಜನೆಗಳು ಜಾರಿ ಆಗುವ ಮುನ್ನವೂ ಜನರು ತಮ್ಮ ಬದುಕು ಕಟ್ಟಿಕೊಂಡಿದ್ದರು. ಅವು ಇಲ್ಲದೆಯೂ ತಮ್ಮ ಬದುಕು ಕಟ್ಟಿಕೊಳ್ಳುತ್ತಾರೆ. ಕಾಂಗ್ರೆಸ್ ಕೋಳಿ ಕೂಗಿದರೆ ಕರ್ನಾಟಕದಲ್ಲಿ ಬೆಳಕು ಹರಿಯುತ್ತದೆ ಎನ್ನುವ ದುಸ್ಥಿತಿ ಕನ್ನಡಿಗರಿಗೆ ಬಂದಿಲ್ಲ ಎಂದಿದ್ದಾರೆ.
ಕನ್ನಡಿಗರ ಸ್ವಾಭಿಮಾನ ಕೆಣಕಬೇಡಿ. ಈಗಾಗಲೇ ದೇಶದಾದ್ಯಂತ ಕಾಂಗ್ರೆಸ್ ಪಕ್ಷ ಅಡ್ರೆಸ್ ಇಲ್ಲದಂತಾಗಿದೆ. ಕನ್ನಡಿಗರ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಕರ್ನಾಟಕದಲ್ಲೂ ಕಾಂಗ್ರೆಸ್ ಪಕ್ಷ ನಿರ್ನಾಮ ಆಗುವುದು ಗ್ಯಾರೆಂಟಿ ಎಂದು ವಾಗ್ದಾಳಿ ನಡೆಸಿದ್ದಾರೆ