
ಬೆಂಗಳೂರು: ಕರ್ನಾಟಕ ಗೃಹ ಮಂಡಳಿಯಿಂದ ನಿವೇಶನಗಳ ಹಂಚಿಕೆಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
20*30, 30*40, 30*50, 40*60, 50*80 ಅಳತೆಯ ನಿವೇಶನಗಳು ಲಭ್ಯವಿವೆ. ಬೆಂಗಳೂರು ದಕ್ಷಿಣ ತಾಲೂಕು ತಾವರೆಕೆರೆ ಹೋಬಳಿ ಬ್ಯಾಲಾಳು ಬಡಾವಣೆಯಲ್ಲಿ 828 ನಿವೇಶನಗಳನ್ನು ಅಭಿವೃದ್ಧಿಪಡಿಸಿದ್ದು, ಹಂಚಿಕೆಗಾಗಿ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಡಿಮೆ ಆದಾಯದ ಗುಂಪಿಗೆ 197 ನಿವೇಶನ, ಮಧ್ಯಮ ಆದಾಯದ ಗುಂಪಿಗೆ 555 ನಿವೇಶನ, ಹೆಚ್ಚು ಆದಾಯದ ಗುಂಪಿಗೆ 67 ನಿವೇಶನಗಳು ಲಭ್ಯವಿದ್ದು, ಪ್ರತಿ ಚದರಡಿಗೆ 1750 ರೂ. ದರ ನಿಗದಿಪಡಿಸಲಾಗಿದೆ. ಆರ್ಥಿಕವಾಗಿ ದುರ್ಬಲ ವರ್ಗದವರಿಗೆ 9 ನಿವೇಶನ ಲಭ್ಯವಿದ್ದು, ಪ್ರತಿ ಚದರಡಿಗೆ 875 ದರ ನಿಗದಿಪಡಿಸಲಾಗಿದೆ.
ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಫೆಬ್ರವರಿ 28 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸಾಮಾನ್ಯ ವರ್ಗದ ಜೊತೆಗೆ ಎಸ್ಸಿ, ಎಸ್ಟಿ, ರಕ್ಷಣಾ ಇಲಾಖೆ, ಮಾಜಿ ಸೈನಿಕ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು, ಹಿರಿಯ ನಾಗರಿಕರು, ಅಂಗವಿಕಲರ ಕೋಟಾದಲ್ಲಿಯೂ ನಿವೇಶನಗಳ ಹಂಚಿಕೆ ಮಾಡಲಾಗುವುದು. ಅರ್ಜಿ ಸಲ್ಲಿಕೆ ಮತ್ತು ಹೆಚ್ಚಿನ ಮಾಹಿತಿಗಾಗಿ khb.karnataka.gov.in ವೆಬ್ಸೈಟ್ ಗಮನಿಸಬಹುದಾಗಿದೆ.