ಚಿತ್ರರಂಗದಲ್ಲಿ ಸಾಮಾನ್ಯವಾಗಿ ನಟರ ಮಕ್ಕಳು ತಂದೆ – ತಾಯಿಯ ಹಾದಿಯಲ್ಲೇ ಸಾಗುತ್ತಾರೆ. ಆದರೆ ಕೆಲವರು ಬೇರೆ ಕ್ಷೇತ್ರಗಳಲ್ಲಿ ತಮ್ಮದೇ ಆದ ಸಾಧನೆ ಮಾಡುತ್ತಾರೆ. ಅಂತಹವರಲ್ಲಿ ಒಬ್ಬರು ಶ್ರುತಂಜಯ್ ನಾರಾಯಣನ್. ಇವರು ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಚಿನ್ನಿ ಜಯಂತ್ ಅವರ ಪುತ್ರ. ಶ್ರುತಂಜಯ್ ನಟನೆಯಲ್ಲಿ ಆಸಕ್ತಿ ಹೊಂದಿದ್ದರೂ, ಅದನ್ನು ಗಂಭೀರವಾಗಿ ಪರಿಗಣಿಸದೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡುವ ಗುರಿ ಹೊಂದಿದ್ದರು. ಅದರಂತೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಾಧನೆ ಮಾಡಿದ್ದಾರೆ.
ಶ್ರುತಂಜಯ್ ಬಾಲ್ಯದಿಂದಲೂ ಓದಿನಲ್ಲಿ ಮುಂದಿದ್ದರು. ಇಂಜಿನಿಯರಿಂಗ್ ಪದವಿ ಪಡೆದ ನಂತರ, ಅಶೋಕ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಬಳಿಕ ಒಂದು ಸ್ಟಾರ್ಟ್‌ಅಪ್‌ನಲ್ಲಿ ಉದ್ಯೋಗಕ್ಕೆ ಸೇರಿದರು. ಅಲ್ಲಿ ಅವರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಾ ಮತ್ತು ಪ್ರತಿದಿನ ನಾಲ್ಕರಿಂದ ಐದು ಗಂಟೆಗಳ ಕಾಲ ಅಧ್ಯಯನ ಮಾಡಲು ವೇಳಾಪಟ್ಟಿ ಹಾಕಿಕೊಂಡರು. ಕಠಿಣ ಪರಿಶ್ರಮದಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ 75ನೇ ರ್ಯಾಂಕ್ ಪಡೆದರು.
ಸಂದರ್ಶನವೊಂದರಲ್ಲಿ ಅವರು ತಮ್ಮ ಅನುಭವ ಮತ್ತು ಅಧ್ಯಯನ ತಂತ್ರವನ್ನು ಹಂಚಿಕೊಂಡಿದ್ದು “ಯುಪಿಎಸ್‌ಸಿ ವ್ಯವಸ್ಥೆ ಒಂದು ಸುದೀರ್ಘ ಪ್ರಕ್ರಿಯೆ. ನಿಮಗೆ ಮಾರ್ಗದರ್ಶಕರು ಇದ್ದರೆ, ನೀವು ಅವರನ್ನು ಸಂಪರ್ಕಿಸಬಹುದು, ಅದು ಯಾವಾಗಲೂ ಪ್ರಯೋಜನಕಾರಿ” ಎಂದು ಹೇಳಿದ್ದಾರೆ. ಶ್ರುತಂಜಯ್ ಅವರ ಕಥೆ ಇತರರಿಗೆ ಪ್ರೇರಣಾದಾಯಕವಾಗಿದೆ.