
ಮಂಡ್ಯ: ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ದೊಂದೇಮಾದಹಳ್ಳಿಯಲ್ಲಿ ಪಿಸ್ತೂಲ್ ನಲ್ಲಿ ಆಟವಾಡುವಾಗ ಆಕಸ್ಮಿಕವಾಗಿ ಗುಂಡು ಹಾರಿ 4 ವರ್ಷದ ಬಾಲಕ ಮೃತಪಟ್ಟಿದ್ದಾನೆ.
ನರಸಿಂಹಮೂರ್ತಿ ಎಂಬುವರಿಗೆ ಸೇರಿದ ಕೋಳಿ ಫಾರಂನ ಕಾರ್ಮಿಕರ ಮನೆಯಲ್ಲಿ ಇಟ್ಟಿದ್ದ ಪಿಸ್ತೂಲ್ ತೆಗೆದುಕೊಂಡು ಆಟವಾಡುವಾಗ ಆಕಸ್ಮಿಕವಾಗಿ ಗುಂಡು ಹಾರಿದೆ. ಕೋಳಿ ಫಾರಂನಲ್ಲಿ ಕೆಲಸಕ್ಕಾಗಿ ಪಶ್ಚಿಮ ಬಂಗಾಳದಿಂದ ಬಂದಿದ್ದ ಶಶಾಂಕ್ ಎಂಬುವರ ಮಗ ಅಭಿಜಿತ್ ಮೃತಪಟ್ಟ ಬಾಲಕ.
ಮತ್ತೊಬ್ಬ ಬಾಲಕನೊಂದಿಗೆ ಅಭಿಜಿತ್ ಭಾನುವಾರ ಸಂಜೆ ಆಟವಾಡುತ್ತಿದ್ದ ವೇಳೆ ಕಾರ್ಮಿಕರ ಮನೆಯಲ್ಲಿದ್ದ ಪಿಸ್ತೂಲ್ ಅನ್ನು ಯಾರಿಗೂ ಗೊತ್ತಾಗದಂತೆ ತೆಗೆದುಕೊಂಡಿದ್ದಾರೆ. ಆಟಿಕೆ ಪಿಸ್ತೂಲ್ ಎಂದುಕೊಂಡು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿದೆ ಎನ್ನಲಾಗಿದೆ.
ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಚಲುವರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.