
ಮಂಡ್ಯ: ಆಸ್ತಿಗಾಗಿ ಅಣ್ಣನೇ ತಮ್ಮನನ್ನು ಸುಪಾರಿ ಕೊಟ್ಟು ಹತ್ಯೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಣ್ಣ ಸೇರಿದಂತೆ 8 ಆರೋಪಿಗಳನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೃಷ್ಣೇಗೌಡ ಕೊಲೆಯಾದ ತಮ್ಮ. ಶಿವನಂಜೇಗೌಡ ತಮ್ಮನನ್ನೇ ಸುಪಾರಿಕೊಟ್ಟು ಹತ್ಯೆ ಮಾಡಿಸಿದ್ದ ಅಣ್ಣ. ಆರೋಪಿ ಅಣ್ಣ ಸೇರಿದಂತೆ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಶಿವನಂಜೇಗೌಡ, ಚಂದ್ರಶೇಖರ್, ಕೊಪ್ಪ ಗ್ರಾಮದ ಬಿ.ಸುರೇಶ್, ಕೆ.ಪಿ.ಉಲ್ಲಾಸ್ ಗೌಡ, ಎ.ಎಂ.ಪ್ರಕಾಶ್, ಕೆ.ಎಂ.ಅಭಿಶೇಕ್, ಕೆ.ಶ್ರೀನಿವಾಸ್, ರಾಮನಗರದ ಹೆಚ್.ಹನುಮೇಗೌಡ ಬಂಧಿತ ಆರೋಪಿಗಳು.
ಕೃಷ್ಣೇಗೌಡ ಮಾಡಿದ್ದ ಸಾಲವನ್ನು ತೀರಿಸಿದ್ದ ಅಣ್ಣ ಶಿವನಂಜೇಗೌಡ ಬಳಿಕ ಆಸ್ತಿಯನ್ನು ತನ್ನ ಪತ್ನಿ ಹೆಸರಿಗೆ ಮಾಡಿಕೊಂಡಿದ್ದ. ತಮ್ಮನಿಗೆ ಜಮೀನು ಬಿಟ್ಟುಕೊಡದೇ ಸತಾಯಿಸುತ್ತಿದ್ದ. ಇದರಿಂದ ಬೇಸತ್ತ ಕೃಷ್ಣೇಗೌಡ ಅಕ್ಕ-ತಂಗಿಯರನ್ನು ಪುಸಲಾಯಿಸಿ ಅಣ್ಣನ ವಿರುದ್ಧ ಕೇಸ್ ಹಾಕಿಸಿದ್ದ. ಜಮೀನು ವಿಚಾರವಾಗಿ ಕೇಸ್ ಹಾಕಿಸಿದ್ದ. ಇದೇಕಾರಣಕ್ಕೆ ಶಿವನಂಜೇಗೌಡ ಫೆ.11ರಂದು ಸುಪಾರಿ ಕೊಟ್ಟು ತಮ್ಮನನ್ನೇ ಕೊಲೆ ಮಾಡಿಸಿದ್ದ.
ಬಳಿಕ ಪಾಪಪ್ರಜ್ಞೆಯಿಂದ ಪಾಪಕಳೆದುಕೊಳ್ಳಲೆಂದು ಪರ್ಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ತೆರಳಿ ಪುಣ್ಯ ಸ್ನಾನ ಮಾಡಿ ಬಂದಿದ್ದ. ಹೀಗೆ ಬಂದವನೇ ಈಗ ಪೊಲೀಸರ ಅತಿಥಿಯಾಗಿದ್ದಾನೆ.