ಮೈಸೂರು : ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ.
ಪೊಲೀಸ್ ಠಾಣೆಯ ಮುಂದೆ ಪ್ರಚೋದನಾಕಾರಿ ಭಾಷಣ ಮಾಡಿದ ಮುಸ್ತಾಕ್ ಪರಾರಿಯಾಗಿದ್ದು, ಸಿಸಿಬಿ ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 15 ಮಂದಿಯನ್ನು ಬಂಧಿಸಲಾಗಿದೆ. ಓರ್ವ ಬಾಲಕನನ್ನು ಬಾಲ ಮಂದಿರಕ್ಕೆ ಪೊಲೀಸರು ಕಳುಹಿಸಿದ್ದಾರೆ.
ಅಕ್ರಮವಾಗಿ ಗುಂಪು ಕಟ್ಟಿಕೊಂಡು ಸರ್ಕಾರದ ಆಸ್ತಿ ಪಾಸ್ತಿಗೆ ಹಾನಿ ಮಾಡಲಾಗಿದ್ದು, ಕಲ್ಲು ತೂರಾಟ ನಡೆಸಿದ 1000ಕ್ಕೂ ಅಧಿಕ ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ, ಗಲಭೆಯಲ್ಲಿ ಇದ್ದವರು ಒಂದು ಸಾವಿರಕ್ಕೂ ಹೆಚ್ಚು ಜನ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ
ಮೈಸೂರಿನಲ್ಲಿ ಕಲ್ಯಾಣಗಿರಿ ಬಡಾವಣೆಯ ಯುವಕನೋರ್ವ ಹಾಕಿದ ಒಂದು ಪೋಸ್ಟ್ ಭಾರಿ ಗಲಾಟೆಗೆ ಕಾರಣವಾಗಿದೆ. ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಮಾಜಿ ಸಿಎಂ ಗಳ ವ್ಯಂಗ್ಯಭರಿತ ಪೋಸ್ಟ್ ಹಾಕಲಾಗಿತ್ತು. ಅಲ್ಲದೇ ಧರ್ಮವೊಂದಕ್ಕೆ ಅವಮಾನವಾಗುವ ರೀತಿ ಪೋಸ್ಟ್ ಹಾಕಲಾಗಿತ್ತು.
ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡು ಆರೋಪಿಯನ್ನ ವಶಕ್ಕೆ ಪಡೆದಿದ್ದರು. ಪೋಸ್ಟ್ ವೈರಲ್ ಆಗುತ್ತಿದ್ದಂತೆ ರೊಚ್ಚಿಗೆದ್ದ ಸಮದಾಯ ಉದಯಗಿರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ಕೂಡ ಪ್ರತಿಯಾಗಿ ಲಾಠಿಚಾರ್ಜ್ ನಡೆಸಿ ಅಶ್ರುವಾಯು ಸಿಡಿಸಿದ್ದಾರೆ. ಕಲ್ಲು ತೂರಾಟದಲ್ಲಿ 14 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳಿಗೆ ಗಾಯಗಳಾಗಿತ್ತು.