ಚೀನಾದ ಚಾಂಗ್ಶಾದಲ್ಲಿ ರೈಲು ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಸಂತ ಉತ್ಸವದ ರಜೆಯ ಕೊನೆಯ ದಿನದಂದು ಈ ಘಟನೆ ಸಂಭವಿಸಿದೆ. ಕುಸಿದು ಬಿದ್ದ ವ್ಯಕ್ತಿಯನ್ನು ರಕ್ಷಿಸಿದಾಗ ಆತ “ನಾನು ಕೆಲಸಕ್ಕೆ ಹೋಗಬೇಕು” ಎಂದು ಹೇಳಿದ್ದಾರೆ. ಆನಂತರ, “ನಾನು ಹೈಸ್ಪೀಡ್ ರೈಲಿನಲ್ಲಿ ಕೆಲಸಕ್ಕೆ ಹೋಗಬೇಕು, ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆಂದು ವರದಿಯಾಗಿದೆ.
ರೈಲಿನಲ್ಲಿ ಹೋಗಲು ಸರದಿಯಲ್ಲಿ ನಿಂತಿದ್ದಾಗ ಈ ಘಟನೆ ಸಂಭವಿಸಿದೆ. ರೈಲು ನಿಲ್ದಾಣದ ಸಿಬ್ಬಂದಿ ಮತ್ತು ವೈದ್ಯರೊಬ್ಬರು ತಕ್ಷಣವೇ ಸಹಾಯಕ್ಕೆ ಧಾವಿಸಿ, ಸುಮಾರು 20 ನಿಮಿಷಗಳ ನಂತರ ಆತನನ್ನು ಪ್ರಜ್ಞಾಹೀನ ಸ್ಥಿತಿಯಿಂದ ಹೊರತಂದರು. ಆದಾಗ್ಯೂ, ಆಸ್ಪತ್ರೆಯಲ್ಲಿ ಸಂಪೂರ್ಣ ತಪಾಸಣೆ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದು, ಆರಂಭದಲ್ಲಿ ನಿರಾಕರಿಸಿದರೂ, ನಂತರ ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಹೋಗಲು ಒಪ್ಪಿಕೊಂಡರು.
ಈ ಘಟನೆಯು ಚೀನಾದಲ್ಲಿ ಆರ್ಥಿಕ ಸಂಕಷ್ಟ ಮತ್ತು ಕೆಲಸದ ಒತ್ತಡದ ಬಗ್ಗೆ ಚರ್ಚೆಯಾಗುವಂತೆ ಮಾಡಿದೆ. “ಅಯ್ಯೋ, ಅವನು ಎಚ್ಚರವಾದ ತಕ್ಷಣ ಹಣ ಸಂಪಾದಿಸುವ ಬಗ್ಗೆ ಯೋಚಿಸಿದ್ದನ್ನು ಕೇಳಿ ನಾನು ತುಂಬಾ ಭಾವುಕನಾದೆ” ಎಂದು ಒಬ್ಬ ಆನ್ಲೈನ್ ವೀಕ್ಷಕರು ಪ್ರತಿಕ್ರಿಯಿಸಿದ್ದಾರೆ. “ಈ ಸಮಾಜದಲ್ಲಿ ಅವನು ಒಬ್ಬಂಟಿಯಲ್ಲ. ನಮ್ಮಲ್ಲಿ ಹೆಚ್ಚಿನವರು ಮನೆ ಸಾಲದಿಂದ ಮಕ್ಕಳ ಶಿಕ್ಷಣದವರೆಗೆ ಹೆಚ್ಚಿನ ಹೊರೆಗಳನ್ನು ಹೊರಬೇಕಾಗುತ್ತದೆ. ಇದು ಎಲ್ಲರಿಗೂ ಸುಲಭವಲ್ಲ” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.