ಹೈದರಾಬಾದ್: ರಸ್ತೆ ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯವೆಂದು ಘೋಷಿಸಲ್ಪಟ್ಟ ವೈದ್ಯರೊಬ್ಬರು ಐದು ಜನರಿಗೆ ಹೊಸ ಜೀವನವನ್ನು ನೀಡಿದ್ದಾರೆ. 24 ವರ್ಷದ ವೈದ್ಯೆಯ ಕುಟುಂಬ ಸದಸ್ಯರು ಭಾನುವಾರ ಆಕೆಯ ಅಂಗಾಂಗಗಳನ್ನು ದಾನ ಮಾಡಿದ್ದಾರೆ.
ನಂಗಿ ಭೂಮಿಕಾ ಎಂದು ಗುರುತಿಸಲ್ಪಟ್ಟ ವೈದ್ಯೆ, ಎಲ್‌ಬಿ ನಗರದ ಕಮಿನೇನಿ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದರು. ಅವರು ತಮ್ಮ ಸಹೋದ್ಯೋಗಿ ಡಾ. ವಿ ಜಯಂತ್ (24) ಅವರೊಂದಿಗೆ ಫೆಬ್ರವರಿ 1 ರಂದು ನಾರ್ಸಿಂಗಿಯಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದು, ಜನವರಿ 31 ರಂದು ಶಂಕರಪಲ್ಲಿಯಲ್ಲಿ ಮದುವೆಯಲ್ಲಿ ಭಾಗವಹಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಈ ದುರಂತ ಸಂಭವಿಸಿತ್ತು.
ಅವರು ಪ್ರಯಾಣಿಸುತ್ತಿದ್ದ ಎಸ್‌ಯುವಿ ಖಾನಾಪುರ ತಲುಪಿದಾಗ ನಿಯಂತ್ರಣ ಕಳೆದುಕೊಂಡು ಅತಿ ವೇಗದಲ್ಲಿ ಮಧ್ಯದಲ್ಲಿರುವ ದೊಡ್ಡ ಜಾಹೀರಾತು ಫಲಕದ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಜಯಂತ್ ಸ್ಥಳದಲ್ಲೇ ಸಾವನ್ನಪ್ಪಿದರೆ ತೀವ್ರವಾಗಿ ಗಾಯಗೊಂಡ ಭೂಮಿಕಾರನ್ನು ಚಿಕಿತ್ಸೆಗಾಗಿ ಕಮಿನೇನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಒಂದು ವಾರದವರೆಗೆ, ಭೂಮಿಕಾ ವೆಂಟಿಲೇಟರ್ ಸಹಾಯದಿಂದ ಜೀವಕ್ಕಾಗಿ ಹೋರಾಡಿದ್ದು ಆದಾಗ್ಯೂ, ಭೂಮಿಕಾ ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯರು ಆಕೆಯ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬರಲಿಲ್ಲ ಎಂದು ಹೇಳಿದ ನಂತರ, ಅವರನ್ನು ಫೆಬ್ರವರಿ 8 ರಂದು ಮೆದುಳು ನಿಷ್ಕ್ರಿಯ ಎಂದು ಘೋಷಿಸಲಾಯಿತು.
ಭೂಮಿಕಾ ಅವರ ತಂದೆ ನಂದ ಕುಮಾರ್ ರೆಡ್ಡಿ ಆಕೆಯ ನೆನಪುಗಳನ್ನು ಶಾಶ್ವತಗೊಳಿಸುವ ಸಲುವಾಗಿ ಆಕೆಯ ಅಂಗಾಂಗಗಳಾದ ಲಿವರ್, ಕಿಡ್ನಿಗಳು, ಹೃದಯ ಮತ್ತು ಶ್ವಾಸಕೋಶಗಳನ್ನು ರಾಜ್ಯ ಸರ್ಕಾರದ ಜೀವನ್‌ದಾನ್ ಅಂಗಾಂಗ ದಾನಕ್ಕೆ ದಾನ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
“ಜೀವನ್‌ದಾನ್ ತೆಲಂಗಾಣವು ಭೂಮಿಕಾ ಅವರ ಕುಟುಂಬಕ್ಕೆ ತನ್ನ ಕೃತಜ್ಞತೆಗಳನ್ನು ತಿಳಿಸುತ್ತದೆ, ಅವರ ಉದಾತ್ತ ನಿರ್ಧಾರವು ಜೀವಗಳನ್ನು ಉಳಿಸಿದೆ ಮತ್ತು ಸ್ಫೂರ್ತಿ ನೀಡಿದೆ. ಜೀವನ್‌ದಾನ್ ಕಾರ್ಯಕ್ರಮವು ತೆಲಂಗಾಣದಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸುಗಮಗೊಳಿಸಲು ಸಮರ್ಪಿತವಾಗಿದೆ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.