ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋದರಿ ಎಂದು ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪ ಎದುರಿಸುತ್ತಿರುವ ಐಶ್ವರ್ಯಾ ಗೌಡ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಅಕ್ರಮವಾಗಿ ಹಲವು ವ್ಯಕ್ತಿಗಳ ಫೋನ್ ಕರೆಗಳ ದಾಖಲೆಗಳ ಸಂಗ್ರಹಣೆ ಆರೋಪದಲ್ಲಿ ಐಶ್ವರ್ಯಾ ಗೌಡ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ತನಿಖಾಧಿಕಾರಿ ಭರತ್ ರೆಡ್ಡಿ ನೀಡಿರುವ ದೂರಿನ ಮೇರೆಗೆ ಬ್ಯಾಟರಾಯನಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಐಶ್ವರ್ಯಾ ಗೌಡ ಅವರ 5 ಹಾಗೂ ಅವರ ಪತಿಯ 2 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು ಅವುಗಳಲ್ಲಿದ್ದ ಡೇಟಾ ಸಂಗ್ರಹಣೆಗಾಗಿ ನ್ಯಾಯಾಲಯದ ಅನುಮತಿ ಪಡೆದು ಪಶ್ಚಿಮ ವಿಭಾಗದ ಸಿಇಎನ್ ಠಾಣೆಗೆ ರವಾನಿಸಿದ್ದರು. ಫೋನ್ ಗಳಲ್ಲಿನ ಡೇಟಾ ಸಂಗ್ರಹಿಸಿದಾಗ ಅದರಲ್ಲಿ ಹಲವು ವ್ಯಕ್ತಿಗಳ ಸಿಡಿಆರ್ ವಿವರಗಳು ಪತ್ತೆಯಾಗಿವೆ. ಫೋನ್ ಕರೆ ದಾಖಲೆಗಳನ್ನು ಸಂಗ್ರಹಿಸಲು ತನಿಖಾಧಿಕಾರಿಗಳು ಅಥವಾ ತನಿಖಾ ಸಂಸ್ಥೆಗೆ ಮಾತ್ರ ಅವಕಾಶವಿರುತ್ತದೆ. ಆದರೆ ಐಶ್ವರ್ಯಾ ಗೌಡ ಫೋನ್ ಗಳಲ್ಲಿ ಈ ದಾಖಲೆಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.