![](https://kannadadunia.com/wp-content/uploads/2020/03/kejriwal-rep-4-1584083457.jpg)
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಸೋಲನುಭವಿಸಿದ್ದು, ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ದೆಹಲಿ ಚುನವಣೆಯಲ್ಲಿ ಸ್ವತಃ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ನವದೆಹಲಿ ಕ್ಷೇತ್ರದಲ್ಲಿ ಸೋಲನುಭವಿಸಿದ್ದಾರೆ.
ಚುನವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಮೊದಲ ಬಾರಿ ಪ್ರತಿಕ್ರಿಯಿಸಿರುವ ಅರವಿಂದ್ ಕೇಜ್ರಿವಾಲ್, ಇಂದು ದೆಹಲಿ ಚುನವಣಾ ಫಲಿತಾಂಶ ಹೊರಬಿದ್ದಿದೆ. ದೆಹಲಿ ಮಹಾಜನತೆಯ ತೀರ್ಪನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ ಎಂದಿದ್ದಾರೆ.
ಆಮ್ ಆದ್ಮಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಜನತೆಯ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ. ದೆಹಲಿ ಜನತೆ ಬಿಜೆಪಿಗೆ ಆಶಿರ್ವಾದ ಮಾಡಿದ್ದಾರೆ. ಬಿಜೆಪಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಕಳೆದ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಜನಪರವಾದ ಹೋರಾಟ ಮುಂದುವರೆಸುತ್ತೇವೆ. ದೆಹಲಿ ವಿಧಾನಸಭೆಯಲ್ಲಿ ಪ್ರಬಲ ವಿಪಕ್ಷವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ತಿಳಿಸಿದ್ದಾರೆ.