ರಾಮನಗರ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದಂತೆಯೇ ಹೊತ್ತಿ ಉರಿದ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ.
ರಾಮನಗರದ ಬಿಡದಿ ಬಳಿ ಈ ಘಟನೆ ನಡೆದಿದೆ. ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಕಾರು ಚಾಲಕ ಕಾರು ನಿಲ್ಲಿಸಿ ಕಾರಿನಲ್ಲಿದ್ದ ಕುಟುಂಬ, ಮಕ್ಕಳು, ಲಗೇಜ್ ಸಮೇತ ಕೆಳಗೆ ಇಳಿಯಲು ಸೂಚಿಸಿದ್ದಾನೆ. ಕೆಲ ಸಮಯದಲ್ಲೇ ಕಾರಿನ ತುಂಬೆಲ್ಲ ಬೆಂಕಿ ಆವರಿಸಿ ಹೊತ್ತಿ ಉರಿದಿದೆ.
ಕಾರಿನ ಎಂಜಿನ್ ನಲ್ಲಿ ತಾಂತ್ರಿಕ ದೋಷದಿಂದಾಗಿ ಬೆಂಕಿ ಸಂಭವಿಸಿದೆ ಎನ್ನಲಾಗಿದೆ. ಕುಟುಂಬವೊಂದು ಮೂವರು ಮಕ್ಕಳೊಂದಿಗೆ ಬೆಂಗಳೂರಿನಿಂದ ರಾಮನಗರಕ್ಕೆ ತೆರಳುತ್ತಿತ್ತು. ಈ ವೇಳೆ ಈ ಘಟನೆರ್ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್, ಮಕ್ಕಳು, ದಂಪತಿ ಪಾರಾಗಿದ್ದಾರೆ.