27 ವರ್ಷಗಳ ಕಾಲ ಸುದೀರ್ಘ ಕಾನೂನು ಹೋರಾಟ ನಡೆಸಿದ್ದ ವ್ಯಕ್ತಿಯೊಬ್ಬರ ಮೇಲಿನ ಅತ್ಯಾಚಾರ ಆರೋಪವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಈ ವ್ಯಕ್ತಿಯು ಅಪಹರಣ ಮತ್ತು ಅತ್ಯಾಚಾರ ಆರೋಪಕ್ಕೆ ಗುರಿಯಾಗಿದ್ದನು. ಆದರೆ, ಈಗ ಆತ 21 ವರ್ಷಗಳ ಹಿಂದೆ ಆಕೆಯನ್ನೇ ವಿವಾಹವಾಗಿದ್ದು, ಇವರಿಗೆ ಈಗ ನಾಲ್ವರು ಮಕ್ಕಳಿದ್ದಾರೆ. ಈ ಪ್ರಕರಣದ ವಿಶಿಷ್ಟ ಸಂದರ್ಭಗಳನ್ನು ಪರಿಗಣಿಸಿ, ಅಪರಾಧವನ್ನು ಎತ್ತಿಹಿಡಿಯುವುದು ಹೆಚ್ಚಿನ ಅನ್ಯಾಯಕ್ಕೆ ಕಾರಣವಾಗುತ್ತದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು, “ಈ ಪ್ರಕರಣದಲ್ಲಿ, ಮೇಲ್ಮನವಿದಾರ-ಆರೋಪಿ ನಂತರ ಪ್ರತಿವಾದಿಯಾಗಿದ್ದವರನ್ನೇ ವಿವಾಹವಾಗಿದ್ದಾರೆ ಮತ್ತು ಅವರಿಗೆ ವಿವಾಹದಿಂದ ನಾಲ್ಕು ಮಕ್ಕಳಿದ್ದಾರೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು, ಈ ಪ್ರಕರಣದ ವಿಚಿತ್ರ ಸಂಗತಿಗಳು ಮತ್ತು ಸಂದರ್ಭಗಳು ಭಾರತ ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ನಮ್ಮ ನ್ಯಾಯವ್ಯಾಪ್ತಿ ಮತ್ತು ಅಧಿಕಾರಗಳನ್ನು ಚಲಾಯಿಸಲು ನಮ್ಮನ್ನು ಪ್ರೇರೇಪಿಸುತ್ತವೆ” ಎಂದು ಹೇಳಿದೆ.
ಆರೋಪಿಯು 1997 ರಲ್ಲಿ ಮಹಿಳೆಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪಕ್ಕಾಗಿ ಶಿಕ್ಷೆಗೊಳಗಾಗಿದ್ದನು. ಆಕೆ ಆ ಸಮಯದಲ್ಲಿ ಅಪ್ರಾಪ್ತ ವಯಸ್ಸಿನವಳಾಗಿದ್ದಳು ಎಂದು ವರದಿಯಾಗಿದೆ. ಆದರೆ ಆ ಬಳಿಕ ಆತ ಆಕೆಯನ್ನೇ ವಿವಾಹವಾಗಿದ್ದು, ದಂಪತಿಗೆ ಈಗ ನಾಲ್ವರು ಮಕ್ಕಳಿದ್ದಾರೆ.