ಹಿಮಾಚಲ ಪ್ರದೇಶದ ಬಿಲಾಸ್ಪುರ ಜಿಲ್ಲೆಯಲ್ಲಿ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಇಲ್ಲಿ ಶಸ್ತ್ರಚಿಕಿತ್ಸೆಯ ವೇಳೆ 33 ವರ್ಷದ ಯುವಕನೊಬ್ಬನ ಹೊಟ್ಟೆಯಿಂದ ಬರೋಬ್ಬರಿ 300 ರೂಪಾಯಿ ಮೌಲ್ಯದ ನಾಣ್ಯಗಳನ್ನು ಹೊರತೆಗೆಯಲಾಗಿದೆ. ಹೊಟ್ಟೆನೋವಿನಿಂದ ಬಳಲುತ್ತಿದ್ದ ಯುವಕ ಆಸ್ಪತ್ರೆಗೆ ದಾಖಲಾಗಿದ್ದ, ಪರೀಕ್ಷೆ ನಡೆಸಿದಾಗ ವೈದ್ಯರಿಗೆ ಅಚ್ಚರಿ ಕಾದಿತ್ತು.
ಜನವರಿ 31 ರಂದು ಬಿಲಾಸ್ಪುರದ ಘುಮರ್ವಿನ್ನಲ್ಲಿ ಈ ಘಟನೆ ಸಂಭವಿಸಿದ್ದು, ಹೊಟ್ಟೆನೋವಿನ ಬಗ್ಗೆ ದೂರು ನೀಡಿದ ಯುವಕನನ್ನು ಆತನ ಕುಟುಂಬ ಆಸ್ಪತ್ರೆಗೆ ಕರೆತಂದಿತ್ತು. ಪ್ರಕರಣದ ಉಸ್ತುವಾರಿ ವಹಿಸಿದ್ದ ವೈದ್ಯ ಡಾ. ಅಂಕುಶ್ ವಿವಿಧ ಪರೀಕ್ಷೆಗಳನ್ನು ನಡೆಸಿ ಅಂತಿಮವಾಗಿ ಎಂಡೋಸ್ಕೋಪಿ ಮಾಡಿದಾಗ ಆತನ ಹೊಟ್ಟೆಯಲ್ಲಿ ಹಲವಾರು ನಾಣ್ಯಗಳು ಇರುವುದು ಕಂಡುಬಂದಿದೆ.
ಡಾ. ಅಂಕುಶ್ ಅವರು ಶಸ್ತ್ರಚಿಕಿತ್ಸೆ ನಡೆಸಿ 247 ಗ್ರಾಂ ತೂಕದ 33 ನಾಣ್ಯಗಳನ್ನು ಯುವಕನ ಹೊಟ್ಟೆಯಿಂದ ಹೊರತೆಗೆದಿದ್ದು, ಕೆಲ ನಾಣ್ಯಗಳು 1 ರೂಪಾಯಿ ಮತ್ತು 2 ರೂಪಾಯಿ ಮೌಲ್ಯದ್ದಾಗಿದ್ದರೆ, ಇನ್ನು ಕೆಲವು 10 ರೂಪಾಯಿ ಮೌಲ್ಯದ್ದಾಗಿದ್ದವು ಎಂದು ವೈದ್ಯರು ತಿಳಿಸಿದ್ದಾರೆ. ಒಂದು 20 ರೂಪಾಯಿ ನಾಣ್ಯ ಸಹ ಪತ್ತೆಯಾಗಿದೆ. ಲ್ಯಾಪ್ರೊಸ್ಕೋಪಿ ಮೂಲಕ ಶಸ್ತ್ರಚಿಕಿತ್ಸೆ ನಡೆಸಲಾಯಿತು.
“ಇದು ಸವಾಲಿನ ಪ್ರಕರಣವಾಗಿತ್ತು. ಶಸ್ತ್ರಚಿಕಿತ್ಸೆ ಮಾಡುವುದು ಸುಲಭವಾಗಿರಲಿಲ್ಲ. ರೋಗಿಯ ಹೊಟ್ಟೆ ಬಲೂನ್ನಂತೆ ಆಗಿತ್ತು ಮತ್ತು ಎಲ್ಲೆಡೆ ನಾಣ್ಯಗಳಿದ್ದವು. ಆಪರೇಷನ್ ಥಿಯೇಟರ್ನಲ್ಲಿ, ನಾವು ಸಿಆರ್ ಮೂಲಕ ನಾಣ್ಯಗಳನ್ನು ಪತ್ತೆ ಮಾಡಿ ನಂತರ ಅವುಗಳನ್ನು ತೆಗೆದುಹಾಕಿದೆವು” ಎಂದು ಶಸ್ತ್ರಚಿಕಿತ್ಸಕರು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆಗೆ ಸುಮಾರು ಮೂರು ಗಂಟೆಗಳು ಬೇಕಾದವು ಎಂದು ಅವರು ಹೇಳಿದರು. ಯುವಕ ನಾಣ್ಯಗಳನ್ನು ಏಕೆ ನುಂಗಿದ ಎಂಬುದು ತಿಳಿದುಬಂದಿಲ್ಲ.