ಬೆಂಗಳೂರು: ಬಿ.ವೈ.ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಲಗಿಳಿಸಿದರೆ ಬಿಜೆಪಿಗೆ 10 ಸೀಟು ಬರಲ್ಲ ಎಂದು ಮಜೈ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ನಮ್ಮ ಆಂತರಿಕ ಕಲಹದಿಂದಾಗಿಯೇ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಪಕ್ಷದಲ್ಲಿನ ಬೆಳವಣಿಗೆ ನೋಡಿ ಜನರು ಬೇಸರಗೊಂಡಿದ್ದಾರೆ. ನಾವು ಇಷ್ಟು ದಿನ ಸೈಲೆಂಟ್ ಆಗಿ ಇದ್ವಿ. ಯಡಿಯೂರಪ್ಪ, ವಿಜಯೇಂದ್ರ ಮಾತನಾಡಬೇಡಿ ಎಂದಿದ್ದರು. ಅದಕ್ಕೆ ಸುಮ್ಮನಿದ್ದೆವು. ಆದರೆ ನಮಗೆ ಇಂದು ನೊವಾಗಿದೆ. ಅದಕ್ಕೆ ತುರ್ತು ಸಭೆ ನಡೆಸಬೇಕಾಯಿತು ಎಂದರು.
ನಮಗೆ ಕಳೆದ 3-4 ತಿಂಗಳಿಂದ ಜೆ.ಪಿ.ನಡ್ಡಾ, ಅಮಿತ್ ಶಾ ಭೇಟಿ ಮಾಡಲು ಸಾಧ್ಯವಾಗ್ತಿಲ್ಲ. ಆದರೆ ಯತ್ನಾಳ ತಂಡ ನಡ್ಡಾ ಭೇಟಿಯಾಗಿದ್ದಾಗಿ ಸುಳ್ಳು ಹೇಳಿ ಸ್ಟೋರಿ ಪ್ಲಾಂಟ್ ಮಾಡಿಸ್ತಿದ್ದಾರೆ. ಭೇಟಿಯಾದ ಫೋಟೋ ಕೊಡಿ ಅಂದ್ರೆ ಇಲ್ಲ, ತೆಗಿಬೇಡಿ ಎಂದಿದ್ದಾರೆ ಅಂತ ಹೇಳ್ತಾರೆ. ವಿಜಯೇಂದ್ರರನ್ನು ನೀವು ಕುಗ್ಗಿಸಲು ಆಗಲ್ಲ. ಯಡಿಯೂರಪ್ಪ ಕಾಲಿಗೆ ಚಕ್ರಕಟ್ಟಿ ಪಕ್ಷ ಕಟ್ಟಿದವರು. ಅದೇ ರೀತಿ ವಿಜಯೇಂದ್ರ ನಾಡಿನ ಯುವಕರ ಕಣ್ಮಣಿ. ಅಂಥವರ ಬಗ್ಗೆ ಮಾತನಾಡ್ತೀರಾ? ಪಕ್ಷವನ್ನು ಕಟ್ಟುವ ಶಕ್ತಿ ವಿಜಯೇಂದ್ರಗೆ ಮಾತ್ರ ಇದೆ ಎಂದರು.
ವಿಜಯೇಂದ್ರರನ್ನು ಟೀಕೆ ಮಾಡೋದು ಮೋದಿ, ಅಮಿತ್ ಶಾ, ನಡ್ಡಾ ಅವರನ್ನು ಟೀಕೆ ಮಾಡಿದಂತೆ. ನಮ್ಮ ಒಳಜಗಳದಿಂದಾಗಿಯೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈಗ ವಿಜಯೇಂದ್ರರನ್ನು ಕೆಳಗಿಳಿಸಿದರೆ ಬಿಜೆಪಿಗೆ ಹತ್ತು ಸೀಟು ಬರಲ್ಲ ಎಂದು ಹೇಳಿದರು. ಫೆ.10ರ ಬಳಿಕ ಶುಭ ಸುದ್ದಿ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರೇ ಮುಂದುವರೆಯುತ್ತಾರೆ ಎನ್ನುವುದೇ ಶುಭ ಸುದ್ದಿ ಎಂದು ಹೇಳಿದರು.