ನವದೆಹಲಿ: ರಾಜ್ಯ ಬಿಜೆಪಿ ಬಣ ಬಡಿದಾಟ ದೆಹಲಿ ಅಂಗಳ ತಲುಪಿದ್ದು, ಯತ್ನಾಳ್ ಬಣದ ಟೀಂ ದೆಹಲಿ ವರಿಷ್ಠರನ್ನು ಒಬ್ಬೊಬ್ಬರನ್ನಾಗಿ ಭೇಟಿಯಾಗಿ ಚರ್ಚೆ ನಡೆಸುತ್ತಿದೆ. ರಾಜ್ಯ ಬಿಜೆಪಿ ಸಂಸದರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬದಲಾವಣೆಗೆ ಯತ್ನಾಳ್ ಬಣ ಎಲ್ಲಾ ರೀತಿಯಲ್ಲೂ ಯತ್ನ ನಡೆಸುತ್ತಿದೆ.
ಈ ನಡುವೆ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ರಾಜ್ಯದಲ್ಲಿ ವೀರಶೈವ, ಲಿಂಗಾಯಿತರೂ ಈಗ ಯಡಿಯೂರಪ್ಪ ಜೊತೆ ಇಲ್ಲ. ಲಿಂಗಾಯಿತರು ಯಡಿಯುರಪ್ಪ ಪರ ಇದ್ದರು ಎಂಬುದು ಮುಗಿದ ಅಧ್ಯಾಯ ಎಂದು ಹೇಳಿದರು.
ನನಗೆ ಯಡಿಯೂರಪ್ಪ ಮೇಲೆ ಈ ಹಿಂದೆ ಬಹಳ ಗೌರವವಿತ್ತು. ಆದರೆ ತನ್ನನ್ನೇ ಜೈಲಿಗೆ ಕಳುಹಿಸಿದ ಮಗನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿದ ಮೇಲೆ ಯಡಿಯೂರಪ್ಪ ಮೇಲಿದ್ದ ಗೌರವ ಕೊಚ್ಚಿಕೊಂಡು ಹೋಯಿತು. ಲಿಂಗಾಯಿತ ನಾಯಕರು ವರಿಷ್ಠರನ್ನು ಭೇಟಿಯಾಗಲಿದ್ದಾರೆ. ವಿಜಯೇಂದ್ರನನ್ನು ಮತ್ತೆ ಅಧ್ಯಕ್ಷನನ್ನಾಗಿ ಮಾಡಲು ನಮ್ಮೆಲ್ಲರ ವಿರೋಧವಿದೆ ಎಂದು ಹೇಳಿದರು.
ರಾಜ್ಯದಲ್ಲಿ ಯಾವ ಲಿಂಗಾಯಿತರೂ ಇಂದು ಯಡಿಯೂರಪ್ಪ ಪರವಿಲ್ಲ. ಎರಡು ಮೂರು ಪೇಮೇಂಟ್ ಸ್ವಾಮೀಜಿಗಳು ಮಾತ್ರ ಅವರ ಪರ ಹೇಳಿಕೆ ಕೊಡುತ್ತಿದ್ದಾರೆ. ಕೆಲ ಫೇಮೆಂಟ್ ಸ್ವಾಮೀಜಿಗಳು ಇರ್ತಾರೆ ಅವರಿಗೆ ಒಂದು ಲಕ್ಷ ಹಣ ಕೊಟ್ಟರೆ ಒಂದು ಸೈಡ್ ಹೇಳಿಕೆ ಕೊಡ್ತಾರೆ ಅಷ್ಟೇ ಎಂದು ಕಿಡಿಕಾರಿದರು.