ಬೆಂಗಳೂರು ಸಾರಿಗೆ ಇಲಾಖೆ, ತೆರಿಗೆ ವಂಚನೆಗಾಗಿ 30 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿದೆ. ಫೆರಾರಿ, ಪೋರ್ಷೆ, ಬಿಎಂಡಬ್ಲ್ಯು, ಮರ್ಸಿಡಿಸ್, ಔಡಿ, ಆಸ್ಟಿನ್ ಮತ್ತು ರೇಂಜ್ ರೋವರ್ ಮಾದರಿಗಳನ್ನು ಒಳಗೊಂಡಂತೆ ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಭಾನುವಾರದಂದು, ಸಾರಿಗೆ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ರಾಜ್ಯದಲ್ಲಿ ಅಗತ್ಯ ತೆರಿಗೆಗಳನ್ನು ಪಾವತಿಸದೆ ಸಂಚರಿಸುತ್ತಿದ್ದ 30 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರಿಗೆ ಉಪ ಆಯುಕ್ತ ಸಿ. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ಈ ತಂಡದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಬಿ. ಶ್ರೀನಿವಾಸ್ ಪ್ರಸಾದ್, ದೀಪಕ್, ಶ್ರೀನಿವಾಸಪ್ಪ ಮತ್ತು ರಂಜಿತ್ ಸೇರಿದಂತೆ 41 ಅಧಿಕಾರಿಗಳು ಇದ್ದರು.
“ಈ ಕಾರುಗಳನ್ನು ರಾಜ್ಯದಲ್ಲಿ ಅಗತ್ಯ ತೆರಿಗೆಗಳನ್ನು ಪಾವತಿಸದೆ ಚಲಾಯಿಸಲಾಗುತ್ತಿತ್ತು ಮತ್ತು ಜಪ್ತಿ ಮಾಡಿದ ವಾಹನಗಳಿಂದ ಸುಮಾರು ಮೂರು ಕೋಟಿ ರೂಪಾಯಿ ತೆರಿಗೆ ವಸೂಲಿ ಮಾಡಲು ನೋಟಿಸ್ ಜಾರಿ ಮಾಡಲಾಗಿದೆ” ಎಂದು ಹಿರಿಯ ಇಲಾಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.