ಉತ್ತರ ಪ್ರದೇಶದ ಬರೇಲಿಯಲ್ಲಿ ಭೀಕರ ಘಟನೆಯೊಂದು ನಡೆದಿದೆ. ಬ್ಲ್ಯಾಕ್‌ಮೇಲ್‌ನಿಂದ ಬೇಸತ್ತ ಮಹಿಳೆಯೊಬ್ಬರು ಲೈಂಗಿಕ ಕ್ರಿಯೆ ಮಧ್ಯೆಯೇ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದಾರೆ. ಈ ಘಟನೆ ಇಡೀ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದೆ.
ಆರೋಪಿ ಮಹಿಳೆ 32 ವರ್ಷ ವಯಸ್ಸಿನವರಾಗಿದ್ದು, ಮೃತ ವ್ಯಕ್ತಿಯನ್ನು ಇಕ್ಬಾಲ್ ಎಂದು ಗುರುತಿಸಲಾಗಿದೆ. ಇಕ್ಬಾಲ್ ಒಬ್ಬ ಕುಶಲಕರ್ಮಿಯಾಗಿದ್ದು, ಈ ಹಿಂದೆ ಆರೋಪಿ ಮಹಿಳೆಯ ಗ್ರಾಮಕ್ಕೆ ಭೇಟಿ ನೀಡಿದ್ದಾಗ ಇಬ್ಬರ ನಡುವೆ ಪರಿಚಯವಾಗಿತ್ತು.
ನಂತರ ಇಬ್ಬರೂ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಒಂದು ದಿನ, ಇಕ್ಬಾಲ್ ತನ್ನ ಬಟ್ಟೆಗೆ ಸಂಬಂಧಿಸಿದ ಕೆಲಸವಿದೆ ಎಂದು ಹೇಳಿ ಮಹಿಳೆಯನ್ನು ತನ್ನ ಮನೆಗೆ ಕರೆದಿದ್ದು, ಅಲ್ಲಿ ಆಕೆ ಬಲವಂತವಾಗಿ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಮಾಡಿದ್ದನು.
ಈ ವಿಷಯವನ್ನು ತನ್ನ ಗಂಡನಿಗೆ ತಿಳಿಸುವುದಾಗಿ ಮಹಿಳೆ ಎಚ್ಚರಿಸಿದಾಗ, ಇಕ್ಬಾಲ್ ತನ್ನ ಬಳಿ ಕಾಲ್ ರೆಕಾರ್ಡಿಂಗ್ ಇದೆ ಎಂದು ಬೆದರಿಸಿದ್ದಲ್ಲದೆ, ಆಕೆಯ ಕುಟುಂಬವನ್ನು ನಾಶಮಾಡುವುದಾಗಿ ಮತ್ತು ಆಕೆಯ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದು, ಮಹಿಳೆಗೆ ಮಕ್ಕಳಿದ್ದ ಕಾರಣ ಮತ್ತು ಅವರ ಜೀವನ ಹಾಳಾಗಬಾರದು ಎಂಬ ಕಾರಣಕ್ಕೆ ಸುಮ್ಮನಾಗಿದ್ದಳು.
ಆದರೆ, ಇಕ್ಬಾಲ್‌ನ ಬ್ಲ್ಯಾಕ್‌ಮೇಲ್ ನಿರಂತರವಾಗಿ ಮುಂದುವರೆದಿದ್ದು, ಇದರಿಂದ ಬೇಸತ್ತ ಮಹಿಳೆ ಆತನನ್ನು ಕೊಲ್ಲಲು ನಿರ್ಧರಿಸಿದ್ದಾಳೆ. ಬುಧವಾರದಂದು, ಇಕ್ಬಾಲ್ ತನ್ನ ಹೆಂಡತಿಯನ್ನು ಆಕೆಯ ತಂದೆಯ ಮನೆಗೆ ಬಿಡಲು ಹೋಗಿದ್ದು, ಹಿಂತಿರುಗುವಾಗ ಮಹಿಳೆ ಆತನಿಗೆ ಕರೆ ಮಾಡಿ ಭೇಟಿಯಾಗಲು ಬಯಸುವುದಾಗಿ ಹೇಳಿದ್ದಳು.
ಇಕ್ಬಾಲ್ ಆಕೆಯ ಗಂಡನಿಗೆ ನಿದ್ದೆ ಮಾತ್ರೆಗಳನ್ನು ನೀಡಲು ಎರಡು ಮಾತ್ರೆಗಳನ್ನು ಕೊಟ್ಟಿದ್ದು, ಅದರಂತೆ ಮಾಡಿದ ಮಹಿಳೆ ರಾತ್ರಿ ಇಕ್ಬಾಲ್‌ನನ್ನು ಕರೆದಿದ್ದಳು. ಇಕ್ಬಾಲ್ ತಾನು ಒಂಟಿಯಾಗಿರುವುದಾಗಿ ಹೇಳಿ ತನ್ನ ಮನೆಗೆ ಬರಲು ಹೇಳಿದ್ದನು.
ಇಕ್ಬಾಲ್‌ನ ಮನೆಗೆ ಹೋದ ಮಹಿಳೆ ಆತನೊಂದಿಗೆ ಮಾತನಾಡುತ್ತಿದ್ದಾಗ, ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಲು ಮುಂದಾಗಿದ್ದು, ಆಕೆ ಅವನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.
ಇಕ್ಬಾಲ್ ಸತ್ತಿರುವುದನ್ನು ಖಚಿತಪಡಿಸಿಕೊಂಡ ನಂತರ, ಆತನ ದೇಹವನ್ನು ಮೆಟ್ಟಿಲ ಬಳಿ ತಳ್ಳಿ ಮನೆಗೆ ಹಿಂದಿರುಗಿದ್ದು, ತನ್ನ ಕುಟುಂಬವನ್ನು ರಕ್ಷಿಸಲು ಬೇರೆ ದಾರಿಯಿಲ್ಲದ ಕಾರಣ ಹೀಗೆ ಮಾಡಬೇಕಾಯಿತು ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಬಂಧಿಸಲಾಗಿದೆ.