ಅಹಮದಾಬಾದ್ನಲ್ಲಿ ತನ್ನ ಗೆಳತಿಯ ಐಷಾರಾಮಿ ಜೀವನ ಶೈಲಿಗೆ ಹಣ ಹೊಂದಿಸಲು ಹೆಣಗಾಡುತ್ತಿದ್ದ ಬ್ಯಾಂಕ್ ಉದ್ಯೋಗಿಯೊಬ್ಬ ಅಪರಾಧ ಮಾರ್ಗವನ್ನು ಹಿಡಿದು, 65 ವರ್ಷದ ಮಹಿಳೆಯಿಂದ ಚಿನ್ನದ ಸರವನ್ನು ಕಸಿದುಕೊಂಡಿದ್ದಾನೆ. ಈ ಪ್ರಕರಣದ ಆರೋಪಿ ಪ್ರದ್ಯುಮ್ನ ಸಿಂಗ್ ವಿಜೇಂದ್ರ ಸಿಂಗ್ ಚಂದ್ರಾವತ್ ಸಾಮಾನ್ಯ ಕಳ್ಳನಲ್ಲ. ಆತ ಮಧ್ಯಪ್ರದೇಶದ ಮಾಜಿ ಶಾಸಕರ ಪುತ್ರ.
ಕಳೆದ ಕೆಲವು ತಿಂಗಳುಗಳಿಂದ ಅಹಮದಾಬಾದ್ನಲ್ಲಿ ವಾಸಿಸುತ್ತಿರುವ ಚಂದ್ರಾವತ್ ತಿಂಗಳಿಗೆ 12,000 ರೂಪಾಯಿ ಸಂಪಾದಿಸುತ್ತಿದ್ದನು, ಇದು ಅವನ ಹೆಚ್ಚುತ್ತಿರುವ ಖರ್ಚುಗಳನ್ನು ಪೂರೈಸಲು ಸಾಕಾಗುತ್ತಿರಲಿಲ್ಲ. ಹಣಕಾಸಿನ ಒತ್ತಡವು ಅವನನ್ನು ಸರಗಳ್ಳತನಕ್ಕೆ ಪ್ರೇರೇಪಿಸಿತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಆತನನ್ನು ಬಂಧಿಸಿದ್ದು, ಆತ ಬೇರೆ ಯಾವುದೇ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.
ಜನವರಿ 25 ರಂದು, ಮೆಮ್ನಗರದ ರಾಜ್ವಿ ಟವರ್ ನಿವಾಸಿ ವಸಂತಿ ಅಯ್ಯರ್ (65) ಮನೆಗೆ ಹಿಂತಿರುಗುತ್ತಿದ್ದು, ಅವರು ಗುರುಕುಲ್ ರಸ್ತೆಯ ಲಕ್ಷ್ಮೀ ಗಾಂಥಿಯಾ ರಥದ ಬಳಿಯ ಕಿರಿದಾದ ಲೇನ್ ತಲುಪಿದಾಗ, ಹಿಂಬದಿಯಿಂದ ಬಂದ ವ್ಯಕ್ತಿಯೊಬ್ಬ ಅವರ 2.5 ತೊಲದ ಚಿನ್ನದ ಮಾಂಗಲ್ಯ ಸರವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದನಾದರೂ ಸರವನ್ನು ಎಳೆಯಲು ಸಾಧ್ಯವಾಗಿರಲಿಲ್ಲ. ನಂತರ ಕಳ್ಳ ಕತ್ತರಿ ಬಳಸಿ ಅದನ್ನು ಮುರಿದು ಪರಾರಿಯಾಗಿದ್ದು, ಈ ಘಟನೆಯ ನಂತರ, ವೃದ್ಧ ಮಹಿಳೆ ಘಟ್ಲೋಡಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆಯ ಸಮಯದಲ್ಲಿ, ಪೊಲೀಸರು ಹಲವಾರು ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಅಪರಾಧವನ್ನು ಗುಂಪಿನಿಂದ ಮಾಡಲಾಗಿಲ್ಲ, ಆದರೆ ಒಬ್ಬ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ ಎಂದು ಕಂಡುಕೊಂಡರು. ಸಿಸಿ ಟಿವಿ ಸಾಕ್ಷ್ಯದ ಆಧಾರದ ಮೇಲೆ, ಪೊಲೀಸರು ಪ್ರದ್ಯುಮ್ನ ಸಿಂಗ್ ಚಂದ್ರಾವತ್ ಆರೋಪಿ ಎಂದು ಗುರುತಿಸಿದ್ದರು.
ಆತ ಮಧ್ಯಪ್ರದೇಶದ ಮಲಾಹೆಡಾದ ನಿವಾಸಿಯಾದ್ದು, ಥಾಲ್ಟೆಜ್ನ ಜಯ್ ಅಂಬೆ ನಗರ್ ಸೊಸೈಟಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಪೊಲೀಸರು ಅವನಿಂದ 1.25 ಲಕ್ಷ ರೂಪಾಯಿ ಮೌಲ್ಯದ ಕದ್ದ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಪ್ರದ್ಯುಮ್ನ ತನ್ನ ತಂದೆ ವಿಜೇಂದ್ರ ಸಿಂಗ್ ಚಂದ್ರಾವತ್ ಮಧ್ಯಪ್ರದೇಶದ ಮಾಜಿ ಕಾಂಗ್ರೆಸ್ ಶಾಸಕರಾಗಿದ್ದರು ಎಂದು ಬಹಿರಂಗಪಡಿಸಿದ್ದಾನೆ. ಪ್ರದ್ಯುಮ್ನ ಎರಡು ತಿಂಗಳಿನಿಂದ ಅಹಮದಾಬಾದ್ನಲ್ಲಿ ವಾಸಿಸುತ್ತಿದ್ದ ಮತ್ತು ಪ್ರಹ್ಲಾದ್ ನಗರದ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದ. ಆದಾಗ್ಯೂ, ಅವನ 12,000 ರೂಪಾಯಿ ಸಂಬಳವು ಅವನ ಮತ್ತು ಅವನ ಗೆಳತಿಯ ಖರ್ಚುಗಳನ್ನು ಭರಿಸಲು ಸಾಕಾಗುತ್ತಿರಲಿಲ್ಲ. ಹಣಕಾಸಿನ ಒತ್ತಡದಿಂದಾಗಿ ಅಪರಾಧಕ್ಕೆ ಮುಂದಾದ ಬಗ್ಗೆ ಆತ ಒಪ್ಪಿಕೊಂಡಿದ್ದಾನೆ.