ವಿಜಯನಗರ: ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಲಹ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಾಜಿ ಸಚಿವ ಶ್ರೀರಾಮುಲು ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಬೆನ್ನಲ್ಲೇ ರಾಮುಲು ಬಿಜೆಪಿ ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಶ್ರೀರಾಮುಲು ಅವರಿಗೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ.
ವಿಜಯನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ನಾನು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಮಾತನಾಡಿದ್ದೇನೆ. ಫೆ.5ರ ಬಳಿಕ ದೆಹಲಿಗೆ ಹೋಗುತ್ತಿದ್ದೇನೆ. ವರಿಷ್ಠರನ್ನು ಭೇಟಿಯಾಗಿ ಎಲ್ಲಾ ಮಾಹಿತಿ ನೀಡುತ್ತೇನೆ ಎಂದರು.
ಬಳಿಕ ವಾಪಾಸ್ ಆಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ. ನಾನು ಯಾವತ್ತೂ ಬಿಜೆಪಿ ತೊರೆಯುವ ಮಾತನಾಡಿಲ್ಲ. ಬೇರೆ ಪಕ್ಷ ಸೇರುತ್ತೇನೆ ಎಂದೂ ಹೇಳಿಲ್ಲ. ಪಕ್ಷ ಸಂಘಟನೆ ಮಾಡಿ 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.