ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಂಗಳವಾರದಿಂದ ಅಂಗನವಾಡಿ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಹೋರಾಟ ಕೈಗೊಂಡಿದ್ದಾರೆ.
ಹೋರಾಟ ನಿರತ ಸಿಬ್ಬಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೋಟಿಸ್ ನೀಡಿದ್ದು, ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗಿದೆ. ಹೋರಾಟ ಮುಂದುವರೆಸಿದಲ್ಲಿ ಸ್ತ್ರೀಶಕ್ತಿ ಸಂಘಗಳಿಂದ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಲಾಗಿದೆ.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹೋರಾಟ ಮುಂದುವರೆದಿದ್ದು, ಹೋರಾಟ ಹತ್ತಿಕ್ಕಲು ಕ್ರಮ ಕೈಗೊಳ್ಳಲಾಗಿದೆ. ಪೊಲೀಸರು ಶುಕ್ರವಾರ ಪ್ರತಿಭಟನಾ ಸ್ಥಳದಲ್ಲಿ ಶಾಮಿಯಾನ ತೆರವುಗೊಳಿಸಲು ಮುಂದಾಗಿದ್ದು, ಇದರಿಂದ ವಾಗ್ವಾದ ನಡೆದಿದೆ.
ವೇತನ ಸೇರಿದಂತೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ ನಡೆಸಲಾಗಿದ್ದು, ಬೇಡಿಕೆ ಈಡೇರಿಸುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾನಿರತ ಅಂಗನವಾಡಿ ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ. ಮುಷ್ಕರ ಕೈಬಿಡುವಂತೆ ಒತ್ತಡ ನಿರ್ಮಾಣ ಮಾಡಿರುವ ಸರ್ಕಾರ ಅನಧಿಕೃತವಾಗಿ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಮುಷ್ಕರದಲ್ಲಿ ಪಾಲ್ಗೊಂಡಿದ್ದೀರಿ. ಫೆಬ್ರವರಿ 1ರೊಳಗೆ ಅಂಗನವಾಡಿ ಆರಂಭಿಸದಿದ್ದರೆ, ಸ್ತ್ರೀಶಕ್ತಿ ಸಂಘಗಳು, ಶಾಲಾ ಶಿಕ್ಷಕರು, ಬಿಸಿಯೂಟ ಸಿಬ್ಬಂದಿಯಿಂದ ಅಂಗನವಾಡಿ ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಆದರೆ ಇದಕ್ಕೆ ಮಣಿಯದ ಅಂಗನವಾಡಿ ಸಿಬ್ಬಂದಿ ಹೋರಾಟ ಮುಂದುವರೆಸಲು ನಿರ್ಧರಿಸಿದ್ದಾರೆ.