ಬೆಂಗಳೂರು : ಇ – ಖಾತಾ ಹೊಂದಿಲ್ಲದ 30 ರಿಂದ 32 ಲಕ್ಷ ಆಸ್ತಿಗಳಿಗೆ ಬಿ – ಖಾತಾ ನೀಡಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ಬೆಂಗಳೂರು ಬಿಟ್ಟು ರಾಜ್ಯದ ಇತರೆ ಸ್ಥಳೀಯ ಸಂಸ್ಥೆಗಳ ನಗರ ಪ್ರದೇಶ ವ್ಯಾಪ್ತಿಯಲ್ಲಿ ಇ – ಖಾತಾ ಹೊಂದಿಲ್ಲದ 30 ರಿಂದ 32 ಲಕ್ಷ ಆಸ್ತಿಗಳಿಗೆ ಬಿ – ಖಾತಾ ನೀಡಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ಶೀಘ್ರವೇ ಸೈಬರ್ ಕೆಫೆಗಳಲ್ಲಿಯೂ ಇ-ಖಾತಾ ವಿತರಿಸಲು ಆದೇಶ ಹೊರಡಿಸಲಾಗುವುದು. ಇ-ಖಾತಾ ವಿತರಣೆ ವ್ಯವಸ್ಥೆಗೆ ವೇಗ ನೀಡಲು ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿ, ಬೆಂಗಳೂರು ಒನ್ ಕೇಂದ್ರಗಳ ಜೊತೆಗೆ ಖಾಸಗಿ ಸೈಬರ್ ಕೆಫೆಗಳಲ್ಲಿ ಇ-ಖಾತಾ ವಿತರಿಸಲು ಆದೇಶ ಹೊರಡಿಸಲಾಗುವುದು ಎಂದು ಹೇಳಲಾಗಿದೆ.
ಆಸ್ತಿಗಳ ದಾಖಲೆ ನಕಲು ಮಾಡಿ ಮಾರಾಟ ಸೇರಿ ಮತ್ತಿತರ ಅಕ್ರಮ ತಡೆಗೆ ಆಸ್ತಿಗಳಿಗೆ ಇ-ಖಾತಾ ನೀಡಲಾಗುತ್ತಿದೆ. ಅಂತೆಯೇ ಬೆಂಗಳೂರು ವ್ಯಾಪ್ತಿಯಲ್ಲಿ 22 ಲಕ್ಷಕ್ಕೂ ಹೆಚ್ಚಿನ ಆಸ್ತಿಗಳಿಗೆ ಇ-ಖಾತಾ ವಿತರಿಸುತ್ತಿದ್ದು, ಇದುವರೆಗೆ ಒಂದು ಲಕ್ಷ ಆಸ್ತಿಗಳಿಗೆ ಇ-ಖಾತಾ ವಿತರಣೆ ಕಾರ್ಯ ಪೂರ್ಣಗೊಂಡಿದೆ. ಸದ್ಯ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿ, ಬೆಂಗಳೂರು ಒನ್ ಕೇಂದ್ರಗಳಲ್ಲಿ ಇ-ಖಾತಾ ವಿತರಿಸಲಾಗುತ್ತಿದೆ. ಈ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಮುಟ್ಟಿಲ್ಲ. ಹೀಗಾಗಿ ಖಾಸಗಿ ಸೈಬರ್ ಕೇಂದ್ರಗಳ ಮೂಲಕ ಇ-ಖಾತಾ ವಿತರಿಸಲು ಬಿಬಿಎಂಪಿ ಮುಂದಾಗಿದೆ.