ಬೆಂಗಳೂರು : ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಸದ್ಯಕ್ಕೆ ಟಿಕೆಟ್ ದರ ಏರಿಕೆ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡದ ಹಿನ್ನೆಲೆ ಸದ್ಯಕ್ಕೆ ಟಿಕೆಟ್ ದರ ಏರಿಸದೇ ಇರಲು ಬಿಎಂಆರ್ ಸಿಎಲ್ ನಿರ್ಧರಿಸಿದೆ ಎನ್ನಲಾಗಿದೆ. ಈ ವರ್ಷ ಮೆಟ್ರೋ ಟಿಕೆಟ್ ದರ ಏರಿಕೆ ಆಗುವುದು ಅನುಮಾನವಾಗಿದೆ.
ಈಗಾಗಲೇ ರಾಜ್ಯದಲ್ಲಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಿರುವ ಹಿನ್ನೆಲೆ ಜನರಿಗೆ ಭಾರಿ ಹೊರೆಯಾಗುವ ಕಾರಣ ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳಕ್ಕೆ ಬ್ರೇಕ್ ಬಿದ್ದಿದೆ. ಮೆಟ್ರೋ ಟಿಕೆಟ್ ದರ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಕಾರಣ ಕೇಳಿದೆ.
ಮೆಟ್ರೋ ದರ ಪರಿಷ್ಕರಣೆ ಸಂಬಂಧ ಬಿಎಂಆರ್ ಸಿಎಲ್ ಅಧಿಕಾರಿಗಳು ಮತ್ತು ದರ ಏರಿಕೆ ಸಮಿತಿಯ ಸದಸ್ಯರ ಜೊತೆ ಸಭೆ ನಡೆದಿತ್ತು. ಮೂಲಗಳ ಪ್ರಕಾರ ಶೇ.15 ರಿಂದ 20 ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು.
ಬೆಂಗಳೂರಿಗರ ಜೀವನಾಡಿಯಾಗಿರುವ ನಮ್ಮ ಮೆಟ್ರೋದಲ್ಲಿ ಪ್ರತಿನಿತ್ಯ ಸಾವಿರಾರು ಜನ ಸಂಚಾರ ಮಾಡುತ್ತಾರೆ. ಕಾರ್ಯಾಚರಣೆ ವೆಚ್ಚ ಅಧಿಕವಾದ ಹಿನ್ನೆಲೆ ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳಕ್ಕೆ ಪ್ರಸ್ತಾಪ ಮಾಡಲಾಗಿತ್ತು. ಆದರೆ ನಮ್ಮ ಮೆಟ್ರೋ ಟಿಕೆಟ್ ದರಕ್ಕೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಬ್ರೇಕ್ ಹಾಕಿದೆ.