ಪಾಟ್ನಾ: ಮಂಗಗಳ ಕಿತಾಪತಿಗೆ ಹೆದರಿ ಮಹಡಿ ಮೇಲಿಂದ ಬಿದ್ದು 10ನೇ ತರಗತಿಯ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಬಿಹಾರದ ಸೀವಾನ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಮನೆಯ ಮಹಡಿ ಮೇಲೆ ವಿದ್ಯಾರ್ಥಿನಿ ಪ್ರಿಯಾ ಕುಮಾರ್ ಓದಿಕೊಳ್ಳುತ್ತಿದ್ದ ವೇಳೆ ಮಂಗಗಳ ಗುಂಪೊಂದು ದಾಳಿ ಮಾಡಿದೆ. ಇದರಿಂದ ಹೆದರಿದ ಪ್ರಿಯಾ ಮಂಗಗಳ ಕಾಟದಿಂದ ಪಾರಾಗಲು ಮುಂದಾಗಿದ್ದಾರೆ. ಗ್ರಾಮದ ಜನ ಮೆಟ್ಟಿಲ ಕಡೆಗೆ ಓಡುವಂತೆ ಆಕೆಗೆ ಕೂಗಿ ಹೇಳಿದ್ದಾರೆ.
ಮಂಗಗಳಿಂದ ತಪ್ಪಿಸಿಕೊಳ್ಳಲು ಮೆಟ್ಟಿಲು ಕಡೆ ಓಡುವಾಗ ಆಕೆಯ ಮೇಲೆ ಮಂಗಗಳು ಜಿಗಿದಿವಿ. ಒಂದು ಮಂಗ ಆಕೆಯನ್ನು ಬಲವಾಗಿ ತಳ್ಳಿದ್ದು ಮಹಡಿ ಮೇಲಿಂದ ಬಿದ್ದು ಪ್ರಿಯಾ ತೀವ್ರವಾಗಿ ಗಾಯಗೊಂಡಿದ್ದಾರೆ. ಸಮೀಪದ ಸೀವಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ತಲೆಗೆ ತೀವ್ರ ಗಾಯವಾಗಿದ್ದ ಕಾರಣ ಚಿಕಿತ್ಸೆ ನೀಡುವ ಮೊದಲೇ ಪ್ರಿಯಾ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೋಷಕರ ಮನವಿಯ ಮೇರೆಗೆ ಮರಣೋತ್ತರ ಪರೀಕ್ಷೆ ನಡೆಸದೇ ಪ್ರಿಯಾ ಮೃತದೇಹವನ್ನು ಹಸ್ತಾಂತರಿಸಲಾಗಿದೆ.