alex Certify 75 ವರ್ಷಗಳ ನಂತರವೂ ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಹೋರಾಟ ವಿಷಾದನೀಯ: ಸಿಎಂ ಸಿದ್ಧರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

75 ವರ್ಷಗಳ ನಂತರವೂ ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಹೋರಾಟ ವಿಷಾದನೀಯ: ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಸಂವಿಧಾನ ಜಾರಿಗೊಳಿಸಿ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಘೋಷಣೆ ಮಾಡಿಕೊಂಡ 75 ವರ್ಷಗಳ ನಂತರವೂ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಹೋರಾಟ ನಡೆಸಬೇಕಾದ ವಿಷಾದನೀಯ ಸ್ಥಿತಿಯಲ್ಲಿ ಗಣರಾಜ್ಯೋತ್ಸವವನ್ನು ನಾವು ಆಚರಿಸುತ್ತಿದ್ದೇವೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಗಣ ರಾಜ್ಯೊತ್ಸವ ಹಿನ್ನಲೆಯಲ್ಲಿ ಸಂದೇಶ ನೀಡಿರುವ ಸಿಎಂ, ಇದು ಗತವೈಭವದಲ್ಲಿ ಮೈಮರೆಯದೆ ವರ್ತಮಾನದ ವಾಸ್ತವಗಳಿಗೆ ಮುಖಾಮುಖಿಯಾಗುವ ಕಾಲ. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳೆಂಬ ಸಂವಿಧಾನದ ಮೂರು ಮುಖ್ಯ ಆಧಾರ ಸ್ಥಂಭಗಳು ಭದ್ರವಾಗಿದ್ದು, ಆರೋಗ್ಯಕರವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸಂವಿಧಾನದ ಪಾಲನೆಯಾಗುತ್ತಿದೆ ಮತ್ತು ಪ್ರಜಾಪ್ರಭುತ್ವ ಸುರಕ್ಷಿತವಾಗಿದೆ ಎಂದು ಅರ್ಥ ಎಂದು ಹೇಳಿದ್ದಾರೆ.

ಕಟುವಾದ ಸತ್ಯ ಏನೆಂದರೆ ಸರ್ವಾಧಿಕಾರದ ದಂಡದಡಿ ನಮ್ಮ ಕಾರ್ಯಾಂಗ ಕರ್ತವ್ಯ ಭ್ರಷ್ಟಗೊಳ್ಳುತ್ತಿದೆ, ಶಾಸಕಾಂಗವನ್ನು ಖರೀದಿಸಲಾಗುತ್ತಿದೆ ಮತ್ತು ನ್ಯಾಯಾಂಗಕ್ಕೆ ಬೆದರಿಕೆ ಒಡ್ಡಿ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಷಡ್ಯಂತ್ರ ನಡೆಯುತ್ತಿದೆ. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳೆಂಬ ಆಧಾರ ಸ್ಥಂಭಗಳು ದುರ್ಬಲಗೊಂಡು ಶಕ್ತಿಹೀನವಾದಾಗ ಸಂವಿಧಾನವೇ ಅಪ್ರಸ್ತುತವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲಾಗುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇಂತಹದ್ದೊಂದು ಅಪಾಯದ ಸ್ಥಿತಿಯಲ್ಲಿ ಭಾರತ ಇಂದು ನಿಂತಿದೆ. ಪ್ರಜಾಪ್ರಭುತ್ವವನ್ನು ಉಳಿಸುವ ದೊಡ್ಡ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯ ಹೆಗಲ ಮೇಲಿದೆ. ಜಾತಿ, ಮತ, ಪಂಥ, ಪ್ರದೇಶದ ಭೇದಗಳನ್ನು ಮರೆತು ಇಡೀ ದೇಶ ಒಂದಾಗಿ ಹೊರಗಿನ ಶತ್ರುಗಳನ್ನು ಹೊಡೆದೋಡಿಸಲು ಹೇಗೆ ಸ್ವಾತಂತ್ರ್ಯಹೋರಾಟ ನಡೆಸಲಾಯಿತೋ, ಅಂತಹದ್ದೇ ಒಂದು ಹೋರಾಟವನ್ನು ದೇಶದೊಳಗಿನ ಸಂವಿಧಾನ ವಿರೋಧಿ ಶತ್ರುಗಳ ವಿರುದ್ಧ ನಡೆಸಬೇಕಾಗಿದೆ. ಇದಕ್ಕಾಗಿ ಎರಡನೇ ಸ್ವಾತಂತ್ರ್ಯ ಹೋರಾಟ ನಡೆಯದೆ ಹೋದರೆ ಮುಂದಿನ ಪೀಳಿಗೆಗೆ ಬದುಕುಳಿಯಲು ಪ್ರಜಾಪ್ರಭುತ್ವ ಇರುವುದಿಲ್ಲ. ಇದೊಂದು ಜೀವನ್ಮರಣದ ಪ್ರಶ್ನೆಯಾಗಿದ್ದು, ಗಣರಾಜ್ಯೋತ್ಸವದ ದಿನವಾದ ಇಂದು ನಾವೆಲ್ಲರೂ ಒಗ್ಗೂಡಿ ದೃಢಚಿತ್ತದಿಂದ ಸಂವಿಧಾನವನ್ನು ಉಳಿಸುವ ಸಂಕಲ್ಪ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಮೂಲಕ ನಮ್ಮ ಭಾರತವನ್ನು ರಕ್ಷಿಸುವ ಹೋರಾಟಕ್ಕೆ ನಮಗಿರುವ ಅಸ್ತ್ರಗಳೆಂದರೆ ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಚಿಂತನೆಗಳು. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ನಮ್ಮ ಕಾಂಗ್ರೆಸ್ ಪಕ್ಷ ಜೈ ಬಾಪು, ಜೈ ಭೀಮ್ ಮತ್ತು ಜೈ ಸಂವಿಧಾನ ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. ನಾಡ ಬಾಂಧವರೆಲ್ಲರೂ ಪಕ್ಷ, ಪಂಥ, ಜಾತಿ-ಧರ್ಮಗಳ ಎಲ್ಲೆಯನ್ನು ಮೀರಿ ಈ ಅಭಿಯಾನದಲ್ಲಿ ಕೈ ಜೋಡಿಸಬೇಕೆಂದು ಮನವಿ ಮಾಡುತ್ತೇನೆ. ಮತ್ತೊಮ್ಮೆ ನಾಡಬಾಂಧವರಿಗೆಲ್ಲ ಗಣರಾಜ್ಯೋತ್ಸವದ ಶುಭಾಶಯಗಳು ಎಂದು ಸಿಎಂ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...