ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದ ಅಗತ್ಯ ನೆರವು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತೆ ಪತ್ರ ಬರೆದಿದ್ದಾರೆ.
ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ದಾವಣಗೆರೆ ಜಿಲ್ಲೆಗಳ ಸುಮಾರು 2.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ, 367 ಸಣ್ಣ ಕೆರೆಗಳನ್ನು ತುಂಬಿಸುವ ಯೋಜನೆಗಾಗಿ ಸರ್ಕಾರ ಇದುವರೆಗೆ 10,000 ಕೋಟಿ ರೂಪಾಯಿ ಖರ್ಚು ಮಾಡಿದೆ. ಕೇಂದ್ರ ಸಾರ್ವಜನಿಕ ಹೂಡಿಕೆ ಮಂಡಳಿ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸಲು 2022ರ ಅಕ್ಟೋಬರ್ 12ರಂದು ಶಿಫಾರಸು ಮಾಡಿತ್ತು. 2023 -24ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಈ ಯೋಜನೆಗೆ 5300 ಕೋಟಿ ರೂ. ನೆರವು ಘೋಷಿಸಲಾಗಿತ್ತು. ಆದರೆ, ಇದುವರೆಗೆ ಹಣ ಬಿಡುಗಡೆಯಾಗದ ಕಾರಣ ಯೋಜನೆ ವಿಳಂಬವಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗಾಗಿ ಘೋಷಣೆಯಾಗಿದ್ದ 5300 ಕೋಟಿ ರೂ. ಬಿಡುಗಡೆ ಮಾಡಲು ಕೇಂದ್ರ ಹಣಕಾಸು ಮತ್ತು ಜಲಶಕ್ತಿ ಸಚಿವಾಲಯಗಳಿಗೆ ನಿರ್ದೇಶನ ನೀಡಬೇಕು. 2025 -26 ನೇ ಸಾಲಿನ ಬಜೆಟ್ ನಲ್ಲಿ ಈ ಯೋಜನೆಗೆ ಆರ್ಥಿಕ ಬೆಂಬಲ ನೀಡಲು ಕ್ರಮ ಕೈಗೊಳ್ಳಬೇಕೆಂದು ಪ್ರಧಾನಿಯವರಿಗೆ ಮಾತ್ರ ಬರೆದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.