ಗೃಹ ಹಿಂಸೆಯ ವಿರುದ್ಧದ ಹೆಜ್ಜೆಯಲ್ಲಿ, ಉತ್ತರ ಪ್ರದೇಶದ ಗೋರಖಪುರದ ಇಬ್ಬರು ಮಹಿಳೆಯರು ತಮ್ಮ ಮದ್ಯ ವ್ಯಸನಿ ಪತಿಯಂದಿರನ್ನು ಬಿಟ್ಟು ಪರಸ್ಪರ ಮದುವೆಯಾಗಿದ್ದಾರೆ.
ಕವಿತಾ ಮತ್ತು ಗುಂಜಾ ತಮ್ಮ ಮನೆಗಳನ್ನು ತೊರೆದು ಬಿಟ್ಟು ಪರಸ್ಪರ ಮದುವೆಯಾಗಲು ನಿರ್ಧರಿಸಿದ್ದು, ಅವರ ವಿವಾಹವು ಗುರುವಾರ ದೇವರಿಯಾದಲ್ಲಿರುವ ಶಿವ ದೇವಾಲಯದಲ್ಲಿ ನಡೆಯಿತು, ಅಲ್ಲಿ ಅವರು ಹಿಂಸೆ ಮತ್ತು ನೋವಿನಿಂದ ಮುಕ್ತವಾದ ಹೊಸ ಜೀವನವನ್ನು ಪ್ರಾರಂಭಿಸಲು ಪ್ರತಿಜ್ಞೆ ಮಾಡಿದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಕವಿತಾ ಮತ್ತು ಗುಂಜಾ ಪ್ರಕಾರ, ಅವರುಗಳು ತಮ್ಮ ಪತಿಯಂದಿರ ಕೈಯಲ್ಲಿ ಅವಮಾನ ಮತ್ತು ಕಿರುಕುಳವನ್ನು ಸಹಿಸಿಕೊಂಡ ನಂತರ, ಸಾಮಾಜಿಕ ಮಾಧ್ಯಮ ವೇದಿಕೆ ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಸಂಪರ್ಕ ಸಾಧಿಸಿದ್ದು, ಒಬ್ಬರ ಮೇಲೊಬ್ಬರು ಆಕರ್ಷಣೆಗೊಳಗಾಗಿದ್ದಾರೆ.
“ನಮ್ಮ ಪತಿಯಂದಿರ ಕುಡಿಯುವಿಕೆ ಮತ್ತು ನಿಂದನೀಯ ವರ್ತನೆಯಿಂದ ನಾವು ಪೀಡಿಸಲ್ಪಟ್ಟಿದ್ದೇವೆ. ಇದು ನಮ್ಮನ್ನು ಶಾಂತಿ ಮತ್ತು ಪ್ರೀತಿಯ ಜೀವನವನ್ನು ಆಯ್ಕೆ ಮಾಡುವಂತೆ ಮಾಡಿದ್ದು, ನಾವು ಗೋರಖಪುರದಲ್ಲಿ ದಂಪತಿಯಾಗಿ ವಾಸಿಸಲು ಮತ್ತು ನಮ್ಮನ್ನು ನಾವು ಬೆಂಬಲಿಸಲು ಕೆಲಸ ಮಾಡಲು ನಿರ್ಧರಿಸಿದ್ದೇವೆ” ಎಂದು ಗುಂಜಾ ಹೇಳಿದರು.
ಗುಂಜಾ, ಈ ವಿವಾಹದಲ್ಲಿ ವರನ ಪಾತ್ರವನ್ನು ನಿರ್ವಹಿಸಿದ್ದು, ಕವಿತಾಳ ನೆತ್ತಿಗೆ ಹಣೆಗೆ ಸಿಂಧೂರ ಇಟ್ಟು ಮಾಲೆ ವಿನಿಮಯ ಮಾಡಿಕೊಳ್ಳುವ ಮೂಲಕ ಸಪ್ತಪದಿ ತುಳಿದಿದ್ದಾರೆ.
ಈ ವಿವಾಹಕ್ಕೆ ಸಾಕ್ಷಿಯಾಗಿದ್ದ ದೇವಾಲಯದ ಪೂಜಾರಿ ಉಮಾ ಶಂಕರ್ ಪಾಂಡೆ, ಮಹಿಳೆಯರು ವಿವಾಹ ಕ್ರಿಯೆಗಳನ್ನು ನಿರ್ವಹಿಸಿ, ಹೊರಟುಹೋದರು ಎಂದು ತಿಳಿಸಿದ್ದಾರೆ.