ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ಗರ್ಭ ಧರಿಸಿದ್ದ ಹಸು ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹೊನ್ನಾವರ ತಾಲೂಕಿನ ವಲ್ಕಿಯ ತೌಫಿಕ್ ಅಹ್ಮದ್ ಜಿದ್ದಾ ಬಂಧಿತ ಆರೋಪಿ. ಜನವರಿ 19ರಂದು ಹಸುವಿನ ಹತ್ಯೆ ನಡೆದಿತ್ತು. ಹಸುವಿನ ರುಂಡ ಬೇರ್ಪಡಿಸಿ, ಕಾಲು ಕತ್ತರಿಸಿ ದೇಹದ ಭಾಗವನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದರು. ಈ ಘಟನೆ ಖಂಡಿಸಿ ಜಿಲ್ಲೆಯಾದ್ಯಂತ ಅಕ್ರೋಶ ವ್ಯಕ್ತವಾಗಿತ್ತು. ತಪ್ಪಿತಸ್ಥರನ್ನು ಬಂಧಿಸುವಂತೆ ಸಾರ್ವಜನಿಕರು, ಗ್ರಾಮಸ್ಥರು ಆಗ್ರಹಿಸಿದ್ದರು.
ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇತರೆ ಆರೋಪಿಗಳ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದೆ.