ಬೆಂಗಳೂರು : ರಾಜ್ಯದಲ್ಲಿ ‘ಮೈಕ್ರೋ ಫೈನಾನ್ಸ್’ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಿಗದಿಯಾಗಿದೆ.
ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಮೈಕ್ರೋ ಫೈನಾನ್ಸ್’ ಹಾವಳಿ ನಿಯಂತ್ರಣಕ್ಕೆ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆಯಿದೆ.
ಮೈಕ್ರೋ ಫೈನಾನ್ಸ್ ನವರ ಕಾಟಕ್ಕೆ ನೊಂದ ಜನರು ಹಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮತ್ತೆ ಹಲವರು ಊರಿಗೇ ಊರೇ ಖಾಲಿ ಮಾಡಿಕೊಂಡು ಹೋಗುತ್ತಿದ್ದಾರೆ. ಫೈನಾನ್ಸ್ ಕಂಪನಿಗಳ ಕಿರುಕುಳ ರಾಜ್ಯದಲ್ಲಿ ಮಿತಿ ಮೀರುತ್ತಿದ್ದು, ಜನರು ಬೀದಿಪಾಲಾಗುತ್ತಿದ್ದಾರೆ.
ಮಾಂಗಲ್ಯ ಸರ ಪೋಸ್ಟ್
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇನ್ನೊಂದೆಡೆ ಮಹಿಳೆಯರು ತಮ್ಮ ಮಾಂಗಲ್ಯ ಭಾಗ್ಯ ಉಳಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಂಗಲ್ಯ ಕಳುಸಿಸಿ ವಿಶೇಷ ಅಭಿಯಾನ ನಡೆಸುತ್ತಿದ್ದಾರೆ.
ಮೈಕ್ರೋ ಫೈನಾನ್ಸ್ ನಿಂದಾಗಿ ನಮ್ಮ ಮಾಂಗಲ್ಯಕ್ಕೆ ಕುತ್ತುಬಂದಿದೆ. ಸಾಲ ಪಡೆದವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಗಂಡಂದಿರ ಜೀವ ಉಳಿಸಿ, ನಮ್ಮ ಮಾಂಗಲ್ಯ ಭಾಗ್ಯ ಕಾಪಾಡಿ ಎಂದು ಹಾವೇರಿ ಮಹಿಳೆಯರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಮಾಂಗಲ್ಯ ಸರ ಪೋಸ್ಟ್ ಮಾಡಿದ್ದಾರೆ.
ರಾಜ್ಯದಲ್ಲಿ ‘ಮೈಕ್ರೋ ಫೈನಾನ್ಸ್’ ಕಿರುಕುಳ ತಡೆಗೆ ಕಠಿಣ ಕಾನೂನು ಜಾರಿ ಮಾಡಲಿದ್ದೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಕೂಡ ನಿನ್ನೆ ಹೇಳಿದ್ದರು. ಮೈಕ್ರೋ ಫೈನಾನ್ಸ್’ ಕಿರುಕುಳ ಆಗುತ್ತಿದೆ ಎಂದು ರಾಜ್ಯಾದ್ಯಂತ ದೂರು ದಾಖಲಾಗಿದೆ. ಬ್ಯಾಂಕ್ ನಿಯಮಗಳ ಪ್ರಕಾರ ಹಣ ರಿಕವರಿ ಮಾಡಲು ಕಾನೂನು ಇದೆ. ಹಾಗೂ ಅವರನ್ನು ರಕ್ಷಣೆ ಮಾಡಲು ಕಾನೂನು ಇದೆ. ಈಗ ಇರುವ ಕಾನೂನು ಸಾಕಾಗುತ್ತಿಲ್ಲ. ರಾಜ್ಯದಲ್ಲಿ ‘ಮೈಕ್ರೋ ಫೈನಾನ್ಸ್’ ಕಿರುಕುಳ ತಡೆಗೆ ಕಠಿಣ ಕಾನೂನು ಜಾರಿ ಮಾಡಲಿದ್ದೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.