ಮುಂಬೈ: ಮುಂಬೈನ ದಿಂಡೋಶಿ ಪ್ರದೇಶದಲ್ಲಿ ಯುವನಕನೊಬ್ಬ ನಾಚಿಗೇಡಿನ ಕೃತ್ಯವೆಸಗಿದ್ದಾನೆ. ದಿಂಡೋಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 20 ವರ್ಷದ ಯುವಕನೊಬ್ಬ 75 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದು, ಇಡೀ ಘಟನೆ ಮಹಿಳೆಯ ಮನೆಯೊಳಗೆ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಜನವರಿ 8(ಬುಧವಾರ) ರಂದು ಈ ಘಟನೆ ನಡೆದಿದೆ. ವೃದ್ಧೆ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಹತ್ತಿರದಲ್ಲಿ ವಾಸಿಸುವ ಆಕೆಯ ಮಗಳು ಮತ್ತು ಸಹೋದರಿ ಸಾಂದರ್ಭಿಕವಾಗಿ ಆಕೆಯನ್ನು ಭೇಟಿ ಮಾಡುತ್ತಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಆರೋಪಿಯನ್ನು ಪತ್ತೆಹಚ್ಚಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ವೃದ್ಧೆಯ ಸುರಕ್ಷತೆ ಉದ್ದೇಶದಿಂದ ಕುಟುಂಬ ಸದಸ್ಯರು ಮನೆಯೊಳಗೆ ಸಿಸಿಟಿವಿಯನ್ನು ಅಳವಡಿಸಿದ್ದರು ಮತ್ತು ಆಕೆಯ ಮಗಳು ಮತ್ತು ಸಹೋದರಿ ದೂರದಿಂದಲೇ ದೃಶ್ಯಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದರು. ಕುಟುಂಬ ಸದಸ್ಯರ ಪ್ರಕಾರ, ವೃದ್ಧೆ ಬುದ್ಧಿಮಾಂದ್ಯತೆ ಮತ್ತು ಸ್ಮರಣಶಕ್ತಿ ನಷ್ಟದಿಂದ ಬಳಲುತ್ತಿದ್ದಾರೆ. ಜನವರಿ 12(ಭಾನುವಾರ) ರಂದು ಮಹಿಳೆಯ ಮಗಳು ಆಕೆಯನ್ನು ಭೇಟಿ ಮಾಡಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ತನ್ನ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ವ್ಯಕ್ತಿಯನ್ನು ಕಂಡು ಗಾಬರಿಗೊಂಡ ಆಕೆ, ತಕ್ಷಣ ಪೊಲೀಸರನ್ನು ಸಂಪರ್ಕಿಸಿ, ಆ ದೃಶ್ಯಾವಳಿಗಳನ್ನು ಸಾಕ್ಷಿಯಾಗಿ ನೀಡಿದ್ದಾಳೆ.
ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಪೊಲೀಸರು ಎರಡು ಗಂಟೆಗಳಲ್ಲಿ ಆರೋಪಿಯನ್ನು ಗುರುತಿಸಿ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.