ರಾಯಚೂರು: ಚಲಿಸುತ್ತಿದ್ದ ಟ್ರಕ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಟ್ರಕ್ ಮುಂಭಾಗ ಸಂಪೂರ್ಣ ಬೆಂಕಿಗಾಹುತಿಯಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಇಲ್ಲಿನ ಮಾನ್ವಿ ತಾಲೂಕಿನ ಕಪಗಲ್ ಬಳಿ ಬರುತ್ತಿದ್ದ ಟ್ರಕ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಟ್ರಕ್ ಚಾಲಕ ಹಾಗೂ ಕ್ಲೀನರ್ ಟ್ರಕ್ ನಿಲ್ಲಿಸಿ ಕೆಳಗಿಳಿದು ಪ್ರಾಣ ರಕ್ಷಿಸಿಕೊಂಡಿದ್ದಾರೆ. ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆಗೆ ಟ್ರಕ್ ಮುಂಭಾಗ ಹೊತ್ತಿ ಉರಿದಿದೆ.
ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಟ್ರಕ್ ಹಿಂಭಾಗದಲ್ಲಿದ್ದ ಗೂಡ್ಸ್ ಸಾಮಾನುಗಳು ಉಳಿದಿದ್ದು, ಮುಂಭಾಗ ಮಾತ್ರ ಸುಟ್ಟು ಕರಕಲಾಗಿದೆ. ಟ್ರಕ್ ಎಂಜಿನ್ ನಲ್ಲಿ ಬಿಸಿ ಹೆಚ್ಚಾಗಿ, ಅತಿಯಾದ ಶಾಖದಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.