ಬೆಂಗಳೂರು: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಿದ್ಧತೆ ಜೋರಾಗಿದೆ. ಅದರಲ್ಲಿಯೂ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆ ನಡೆಸಲಾಗಿದೆ. ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಕೆಲ ಮಾರ್ಗಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.
ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಮಾಹಿತಿ ನಿಡಿದ್ದು, ಜನವರಿ 26ರಂದು ಬೆಳಿಗ್ಗೆ 9 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹನ ನೆರವೇರಿಸಲಿದ್ದಾರೆ. ಗಣರಾಜ್ಯೋತ್ಸವದ ವೇಳೆ ಯಾವುದೇ ತೊಂದರೆಯಾಗದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜನವರಿ 26ರಂದು ಬೆಳಿಗ್ಗೆ 8:30ರಿಂದ 10:30ರವರೆಗೆ ಕಬ್ಬನ್ ರಸ್ತೆ, ಕಾಮರಾಜ ರಸ್ತೆ, ಬಿಆರ್ ವಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯ ರಸ್ತೆಗಳಲ್ಲಿ ಸಂಚರಿಸಲು ನಗರ ಸಂಚಾರ ಪೊಲೀಸರ ನಿಯೋಜನೆ ಮಾಡಲಾಗಿದೆ.
ವಾಹನ ನಿಲುಗಡೆಗೆ ಕೆಲವೆಡೆ ನಿಷೇಧಿಸಲಾಗಿದೆ. ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಲೇ ಸರ್ಕಲ್, ಶಿವಾಜಿನಗರ ಬದ್ಸ್ ನಿಲ್ದಾಣ, ಕಬ್ಬನ್ ರಸ್ತೆ, ಸಿಟಿಒ ವೃತದಿಂದ ಕೆ.ಆರ್. ರಸ್ತೆ, ಕಬ್ಬನ್ ಜಂಕ್ಷನ್ ವರೆಗೆ, ಎಂಜಿ ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ವಾಹನ ನಿಲುಗಡೆಗೆ ಅವಕಾಶವಿಲ್ಲ ಎಂದು ತಿಳಿಸಿದರು.
ಇನ್ನು ಗಣರಾಜ್ಯೋತ್ಸವ ದಿನಾಚರಣೆಗೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. 8 ಡಿಸಿಪಿ, 17 ಎಸಿಪಿ, 44 ಪಿಐ, 114 ಪಿಎಸ್ ಐ, 58 ಎ ಎಸ್ ಐ, 80 ಮಂದಿ ಸಿಬ್ಬಂದಿ, 30 ಜನ ಕ್ಯಾಮರಾ ಸಿಬ್ಬಂದಿ ಸೇರಿ 1051 ಜನ ಅಧಿಕರಿಗಳು ಭದ್ರತೆಗೆ ಇರುತ್ತಾರೆ. ಬಂದೋಬಸ್ತ್ ಗಾಗಿ 10 ಕೆ ಎಸ್ ಆರ್ ಪಿ ತುಕಡಿ, 2 ಅಗ್ನಿಶಾಮಕ ವಾಹನ, ಕ್ಷಿಪ್ರ ಕಾರ್ಯಪಡೆ, ಮಾಣಿಕ್ ಷಾ ಮೈದಾನದ ಸುತ್ತ 103 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತದೆ ಎಂದು ವಿವರಿಸಿದರು.