ಬೆಂಗಳೂರು: ಏಪ್ರಿಲ್ -ಮೇ ತಿಂಗಳಲ್ಲಿ ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಕಾಂಗ್ರೆಸ್ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳಲ್ಲೂ ಅಧಿಕಾರ ಹಿಡಿಯಲು ನೀಲಿ ನಕ್ಷೆ ಸಿದ್ಧಪಡಿಸಲು ಮುಂದಾಗಿದೆ. ಈ ತಿಂಗಳ ಅಂತ್ಯಕ್ಕೆ ಅಥವಾ ಫೆಬ್ರವರಿ ಮೊದಲ ವಾರ ಕೆಪಿಸಿಸಿ ಪ್ರಮುಖರ ಸಭೆ ನಡೆಸಲಾಗುವುದು. ಚುನಾವಣೆಗೆ ಪೂರ್ವ ತಯಾರಿ ಬಗ್ಗೆ ವ್ಯವಸ್ಥಿತ ಯೋಜನೆ ರೂಪಿಸಲಿದ್ದು, ಪಕ್ಷ ಯಾವುದೇ ಹಂತದಲ್ಲಿ ಹಿಡಿತ ಕಳೆದುಕೊಳ್ಳಬಾರದು ಎನ್ನುವ ನಿಟ್ಟಿನಲ್ಲಿ ನಾಯಕರು ಕ್ರಮ ಕೈಗೊಂಡಿದ್ದಾರೆ.
ಕೆಳಹಂತದಿಂದ ಪಕ್ಷ ಸಂಘಟನೆ ಮತ್ತಷ್ಟು ಬಿಗಿಗೊಳಿಸಿ ಕೆಳಹಂತದ ಸಮಿತಿಗಳನ್ನು ಸಕ್ರಿಯವಾಗಿಡಲು ಮತ್ತು ಕ್ಷೇತ್ರದಲ್ಲಿ ಉಸ್ತುವಾರಿಗಳು ನಿರಂತರವಾಗಿ ಭೇಟಿ ನಡೆಸುವ ಬಗ್ಗೆ ತಿಳಿಸಲಾಗಿದೆ. ಇವುಗಳ ಜೊತೆಗೆ ಗ್ಯಾರಂಟಿ ಯೋಜನೆಯ ಫಲಾನುಭವಿಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು, ಅಭ್ಯರ್ಥಿಗಳ ಆಯ್ಕೆಯಲ್ಲಿ ಬಂಡಾಯ ಉಂಟಾಗದಂತೆ ನೋಡಿಕೊಳ್ಳಲು ಚಿಂತನೆ ನಡೆದಿದೆ. ಇದಕ್ಕಾಗಿ ಈಗಾಗಲೇ ಜವಾಬ್ದಾರಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷರ ನೇತೃತ್ವದಲ್ಲಿ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳನ್ನು ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಲು ಕ್ರಮ ಕೈಗೊಳ್ಳಲಾಗಿದೆ.
ಇದರೊಂದಿಗೆ ಶಾಸಕರು ಮತ್ತು ಕಳೆದ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿದ್ದವರನ್ನು ಬಳಸಿಕೊಂಡು ವ್ಯವಸ್ಥಿತವಾಗಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಮುಂದಿನ ವಾರ ಮಹತ್ವದ ಸಭೆ ನಡೆಸಲಾಗುವುದು ಎಂದು ಹೇಳಲಾಗಿದೆ.