ಬೆಂಗಳೂರು: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಜನವರಿ 24ರ ಶುಕ್ರವಾರ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಎಲ್ಲಾ ಹೆಣ್ಣು ಮಕ್ಕಳಿಗೆ ವಿಶೇಷ ಉಡುಗೊರೆ ನೀಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ಹೆಣ್ಣು ಮಕ್ಕಳ ಲಿಂಗಾನುಪಾತ ಹೆಚ್ಚಳ, ಹೆಣ್ಣುಭ್ರೂಣ ಹತ್ಯೆ ತಡೆಯುವ ಜಾಗೃತಿ ಕಾರ್ಯಕ್ರಮದ ಭಾಗ ಇದಾಗಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆಯಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪಿಂಕ್ ಲೈಟ್ ಬೆಳಗಿಸಲು ತಿಳಿಸಲಾಗಿದೆ.
ಶುಕ್ರವಾರ ಜನಿಸಿದ ಹೆಣ್ಣು ಮಗುವಿನ ಕುಟುಂಬಕ್ಕೆ 1000 ರೂ. ಮೌಲ್ಯದ ಮಕ್ಕಳ ಕಿಟ್ ಗಳನ್ನು ನೀಡಲಾಗುವುದು. ಹೆಣ್ಣು ಮಕ್ಕಳ ದಿನಾಚರಣೆಗೆ ಶುಭಾಶಯಗಳು, ಹೆಣ್ಣು ಮಕ್ಕಳ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಹೆಣ್ಣು ಮಕ್ಕಳ ಆರೋಗ್ಯ ಕಾಪಾಡಲು ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೆಣ್ಣು ಭ್ರೂಣ ಹತ್ಯೆ ನಡೆಸುವವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆ ಹೆಣ್ಣುಮಕ್ಕಳ ರಕ್ತಹೀನತೆ ಹೋಗಲಾಡಿಸುವ ಮಹತ್ವದ ಯೋಜನೆಯಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.